‘ನಿಮ್ಮ ದೇಶದ ಬಗ್ಗೆ ಕಾಳಜಿ ವಹಿಸಿ ಸಾಕು’

Update: 2020-12-01 15:09 GMT
ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ

ಹೊಸದಿಲ್ಲಿ,ಡಿ.1: ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಹೇಳಿಕೆ ನೀಡಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಭಾರತೀಯ ಟ್ವಿಟರ್‌ಗಳ ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ. ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸಿದ್ದಕ್ಕಾಗಿ ಟ್ವಿಟರಿಗರು ಟ್ರೂಡೊ ಅವರಿಗೆ ‘ಕ್ಲಾಸ್’ತೆಗೆದುಕೊಂಡಿದ್ದಾರೆ. ನೀವು ನಿಮ್ಮ ದೇಶದ ಬಗ್ಗೆಯಷ್ಟೇ ಕಾಳಜಿ ವಹಿಸಿ ಸಾಕು ಎಂದು ಕುಟುಕಿದ್ದಾರೆ.

‘ನಿಮ್ಮ ಕಾಳಜಿ ನಮಗೆ ಅರ್ಥವಾಗಿದೆ. ಆದರೆ ಭಾರತದ ಆಂತರಿಕ ವಿಷಯಗಳು ಇನ್ನೊಂದು ರಾಷ್ಟ್ರದ ರಾಜಕೀಯಕ್ಕೆ ಮೇವು ಅಲ್ಲ. ನಾವು ಸದಾ ಇತರ ರಾಷ್ಟ್ರಗಳೊಡನೆ ಸೌಜನ್ಯ,ವಿನಯದಿಂದ ವ್ಯವಹರಿಸುತ್ತೇವೆ. ದಯವಿಟ್ಟು ಅದನ್ನು ಗೌರವಿಸಿ ’ಎಂದು ಟ್ವೀಟಿಸಿರುವ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು,ಇತರ ದೇಶಗಳೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮುನ್ನ ರೈತರ ಬಿಕ್ಕಟ್ಟನ್ನು ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ. ಸೋಮವಾರ ಗುರುನಾನಕ್ ಜಯಂತಿ ಅಂಗವಾಗಿ ಆನ್‌ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರುಡೊ ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳ ಕುರಿತು ಮಾಧ್ಯಮ ವರದಿಗಳನ್ನು ಪ್ರಸ್ತಾಪಿಸಿ,ಕೆನಡಾ ಎಂದಿಗೂ ಶಾಂತಿಯುತ ಪ್ರತಿಭಟನೆಯ ಹಕ್ಕುಗಳನ್ನು ಸಮರ್ಥಿಸುತ್ತದೆ. ಅಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಮತ್ತು ಹಲವಾರು ಜನರು ತಮ್ಮ ಕುಟುಂಬಗಳು ಹಾಗೂ ಸ್ನೇಹಿತರ ಬಗ್ಗೆ ಚಿಂತೆಗೀಡಾಗಿದ್ದಾರೆ ಎಂದು ಹೇಳಿದ್ದರು.

ಕೆನಡಾ ತನ್ನ ಕಳವಳಗಳನ್ನು ಭಾರತೀಯ ಅಧಿಕಾರಿಗಳಿಗೆ ತಿಳಿಸಿದೆ. ಪ್ರತಿಯೊಬ್ಬರೂ ಸಹಕರಿಸಲು ಇದು ಸಕಾಲವಾಗಿದೆ ಎಂದು ವಿಶ್ವ ಸಿಖ್ ಸಂಘಟನೆಯು ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಟ್ರೂಡೊ ಹೇಳಿದ್ದಾರೆ.

ಕೆನಡಾ ಪ್ರಧಾನಿ ಹೇಳಿಕೆ ಅನಗತ್ಯ:ಭಾರತ

‘ಭಾರತದ ರೈತರಿಗೆ ಸಂಬಂಧಿಸಿದಂತೆ ಕೆನಡಾ ನಾಯಕರಿಂದ ತಪ್ಪು ಮಾಹಿತಿಗಳಿಂದ ಕೂಡಿರುವ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ಪ್ರಜಾಪ್ರಭುತ್ವ ದೇಶದ ಆಂತರಿಕ ವ್ಯವಹಾರಗಳ ಕುರಿತು ಇಂತಹ ಹೇಳಿಕೆಗಳು ಅನಗತ್ಯವಾಗಿವೆ. ರಾಜಕೀಯ ಉದ್ದೇಶಗಳಿಗಾಗಿ ರಾಜತಾಂತ್ರಿಕ ಸಂವಾದಗಳನ್ನು ತಪ್ಪಾಗಿ ಬಿಂಬಿಸದಿರುವುದು ಒಳ್ಳೆಯದು ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಬುಧವಾರ ಇಲ್ಲಿ ತಿಳಿಸಿದರು. ಅವರು ಟ್ರೂಡೊ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News