ರಿಮೋಟ್ ಕಂಟ್ರೋಲ್ ಚಾಲಿತ ಮಶಿನ್‌ಗನ್‌ನಿಂದ ಇರಾನ್ ವಿಜ್ಞಾನಿ ಹತ್ಯೆ?

Update: 2020-12-01 16:27 GMT

ಟೆಹರಾನ್ (ಇರಾನ್), ಡಿ. 1: ಇರಾನ್‌ನ ಉನ್ನತ ಪರಮಾಣು ವಿಜ್ಞಾನಿ ಮೊಹ್ಸಿನ್ ಫಖ್ರಿಝಾದೆಯನ್ನು ಹೊಸ ಮಾದರಿಯ ‘ಸಂಕೀರ್ಣ ಕಾರ್ಯಾಚರಣೆ’ಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಇರಾನ್‌ನ ಉನ್ನತ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ. ಹತ್ಯೆಯ ಹಿಂದೆ ಬದ್ಧ ಶತ್ರು ಇಸ್ರೇಲ್ ಮತ್ತು ದೇಶಭ್ರಷ್ಟ ಪ್ರತಿಪಕ್ಷ ಗುಂಪೊಂದು ಇದೆ ಎಂದು ಅವರು ಆರೋಪಿಸಿದ್ದಾರೆ.

‘‘ಹತ್ಯಾ ಕಾರ್ಯಾಚರಣೆಯು ಅತ್ಯಂತ ಸಂಕೀರ್ಣವಾಗಿತ್ತು. ಕಾರ್ಯಾಚರಣೆಯಲ್ಲಿ ಇಲೆಕ್ಟ್ರಾನಿಕ್ ಪರಿಕರಗಳನ್ನು ಬಳಸಲಾಗಿತ್ತು ಹಾಗೂ ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಯಾರೂ ಇರಲಿಲ್ಲ’’ ಎಂದು ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ರಿಯರ್ ಅಡ್ಮಿರಲ್ ಅಲಿ ಶಮ್‌ಖಾನಿ ಹೇಳಿದರು.

‘‘ಹತ್ಯೆಯಲ್ಲಿ ಇಸ್ರೇಲ್ ಸರಕಾರ ಮತ್ತು ಅದರ ಬಾಹ್ಯ ಬೇಹುಗಾರಿಕಾ ಸಂಸ್ಥೆ ಮೊಸಾದ್ ಜೊತೆಗೆ ಪೀಪಲ್ಸ್ ಮುಜಾಹಿದೀನ್ ಆಫ್ ಇರಾನ್ (ಎಮ್‌ಇಕೆ) ಖಂಡಿತವಾಗಿಯೂ ಶಾಮೀಲಾಗಿದೆ’’ ಎಂದು ಅವರು ನುಡಿದರು.

‘‘ಶತ್ರುಗಳು ಸಂಪೂರ್ಣ ಹೊಸ, ವೃತ್ತಿಪರ ಮತ್ತು ವಿಶೇಷ ವಿಧಾನವೊಂದನ್ನು ಬಳಸಿದ್ದಾರೆ ಹಾಗೂ ಆ ಮೂಲಕ ತಮ್ಮ ಗುರಿಯನ್ನು ಸಾಧಿಸಿದ್ದಾರೆ’’ ಎಂದರು.

ಶಮ್‌ಖಾನಿಯ ವೀಡಿಯೊ ಸಂದರ್ಶನವು ಸರಕಾರಿ ಟಿವಿ ಮತ್ತು ‘ಫಾರ್ಸ್’ ಸುದ್ದಿ ಸಂಸ್ಥೆಯಲ್ಲಿ ಪ್ರಸಾರವಾಗಿದೆ.

ಪಿಕಪ್ ಟ್ರಕ್ಕೊಂದರ ಮೇಲೆ ಇರಿಸಲಾಗಿದ್ದ ರಿಮೋಟ್ ಕಂಟ್ರೋಲ್ ಚಾಲಿತ ಸ್ವಯಂಚಾಲಿತ ಮಶಿನ್‌ಗನ್ ಮೂಲಕ ದಾಳಿ ನಡೆಸಲಾಗಿದೆ ಎಂದು ‘ಫಾರ್ಸ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News