ಕರ್ನಾಟಕದ ನಾರಾಯಣ ಕೊರಗಪ್ಪ ಸಹಿತ 10 ಮಂದಿ ರಾಜ್ಯ ಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ
ಹೊಸದಿಲ್ಲಿ, ಡಿ. 1: ಉತ್ತರಪ್ರದೇಶ, ಉತ್ತರಾಖಂಡ ಹಾಗೂ ಕರ್ನಾಟಕದಿಂದ ರಾಜ್ಯ ಸಭೆಗೆ ನೂತನವಾಗಿ ಹಾಗೂ ಮರು ಆಯ್ಕೆಯಾದ 10 ಮಂದಿ ಸದಸ್ಯರಿಗೆ ಮೇಲ್ಮನೆಯ ಕೊಠಡಿಯಲ್ಲಿ ಸೋಮವಾರ ಪ್ರಮಾಣ ವಚನ ಬೋಧಿಸಲಾಯಿತು. ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಜ್ಯ ಸಭೆಯ ಕೊಠಡಿಯಲ್ಲಿ ಪ್ರಮಾಣ ವಚನ ಬೋಧಿಸಲಾಯಿತು. ಕರ್ನಾಟಕದ ನಾರಾಯಣ ಕೊರಗಪ್ಪ, ಉತ್ತರಪ್ರದೇಶದ ಬ್ರಿಜ್‌ಲಾಲ್, ಗೀತಾ ಅಲಿಯಾಸ್ ಚಂದ್ರಪ್ರಭಾ, ರಾಮ್‌ಜಿ, ಹರ್ದ್ವಾರ್ ದುಬೆ, ಹರ್ದೀಪ್ ಸಿಂಗ್ ಪುರಿ, ನೀರಜ್ ಶೇಖರ್, ಬಿ.ಎಲ್ ವರ್ಮಾ, ರಾಮ್ ಗೋಪಾಲ್ ಯಾದವ್ ಹಾಗೂ ಉತ್ತರಾಖಂಡದ ನರೇಶ್ ಬನ್ಸಾಲ್ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ನೂತನವಾಗಿ ಹಾಗೂ ಮರು ಆಯ್ಕೆಯಾದ ಸದಸ್ಯರನ್ನು ಸ್ವಾಗತಿಸಿದರು ಹಾಗೂ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸದನದ ನಾಯಕ ತಾವರ್‌ಚಂದ್ ಗೆಹ್ಲೋಟ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರದ ಸಹಾಯಕ ಸಚಿವ ವಿ. ಮುರಳೀಧರನ್ ಹಾಗೂ ಅರ್ಜುನ್ ರಾಮ್ ಮೇಘಾವಲ್, ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಮೊದಲಾದವರು ಉಪಸ್ಥಿತರಿದ್ದರು.