ಅಂಧ ವಿದ್ಯಾರ್ಥಿ ಜಲಾಲುದ್ದೀನ್ ಗೆ ಜೂನಿಯರ್ ರಿಸರ್ಚ್ ಫೆಲೋಶಿಪ್

Update: 2020-12-02 05:25 GMT

ಮಲಪ್ಪುರಂ : ಇಲ್ಲಿನ ಮ‌ಅ್‌ದಿನ್ ಅಕಾಡಮಿಯ ಅಂಧ ವಿದ್ಯಾರ್ಥಿ ಜಲಾಲುದ್ದೀನ್ ಸಂಶೋಧನೆಗಾಗಿ ನೆಟ್ (ಎನ್ ಇ ಟಿ) ಅರ್ಹತೆ ಪಡೆದವರಿಗೆ ಯುಜಿಸಿಯು ನೀಡುವ  ಜೆಆರ್‌ಎಫ್( ಜೂನಿಯರ್ ರಿಸರ್ಚ್ ಫೆಲೋಶಿಪ್) ಗಳಿಸುವ ಮೂಲಕ ಶಿಕ್ಷಣ ಕ್ಷೇತ್ರದ ಗಮನ ಸೆಳೆದಿದ್ದಾರೆ.

ಕಳೆದ ಬಾರಿ ಜಲಾಲುದ್ದೀನ್ ನೆಟ್ ಅರ್ಹತೆಯನ್ನು ಪಡೆದಿದ್ದರು. 2011ರಲ್ಲಿ ಧಾರ್ಮಿಕ-ಲೌಕಿಕ ಸಂಯೋಜಿತ ಶಿಕ್ಷಣ ಪಡೆಯಲೆಂದು ಮ‌ಅ್‌ದಿನ್ ಅಕಾಡಮಿಗೆ ಪ್ರವೇಶ ಪಡೆದ ಜಲಾಲುದ್ದೀನ್,  ತನ್ನ ಕೈಯಿಂದಲೇ ಹದಿನೈದರಷ್ಟು ಕೃತಿಗಳನ್ನು ಬ್ರೈಲ್ ಲಿಪಿಯಲ್ಲಿ ಬರೆದಿದ್ದಾರೆ. ಅವರು ಬ್ರೈಲ್ ಲಿಪಿ ಕಲಿತದ್ದು ಕೂಡಾ ಮ‌ಅ್‌ದಿನ್ ಸಂಸ್ಥೆಯ 'ಏಬಲ್ ವರ್ಲ್ಡ್' ನಲ್ಲಿ.

ದೃಷ್ಟಿ ಸಾಮರ್ಥ್ಯ ಇರುವವರು ಕೈಯಾಡಿಸುವ ಎಲ್ಲ ಕ್ಷೇತ್ರಗಳಲ್ಲಿ ತಾನೂ ಸಾಧಿಸಬೇಕು ಎಂಬುದು ಜಲಾಲುದ್ದೀನ್ ರ ಬಯಕೆ. ಭಾಷಣ ರಂಗದಲ್ಲಿ, ಸೈಕಲ್ ಚಾಲನೆ, ಈಜು ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲಿ ಈಗಾಗಲೇ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಅವರು ಪಿಎಚ್‌ಡಿ ಮಾಡುವ ಸಿದ್ಧತೆಯಲ್ಲಿದ್ದಾರೆ.

ತನ್ನ ಬದುಕಿಗೆ ಬೆಳಕು ನೀಡಿ, ಈ ಅವಿಸ್ಮರಣೀಯ ಘಟ್ಟದ ತನಕ ದಾರಿ ತೋರಿದ್ದು ಮ‌ಅ್‌ದಿನ್ ಸಂಸ್ಥೆ ಹಾಗೂ ಅದರ ನೇತೃತ್ವ ವಹಿಸಿರುವ ಹಾಗೂ ತನ್ನ ಗುರು ಬದ್ರುಸ್ಸಾದಾತ್ ಇಬ್ರಾಹೀಮ್ ಖಲೀಲ್ ಅಲ್ ಬುಖಾರಿ ಎಂದು ಜಲಾಲುದ್ದೀನ್ ಕೃತಜ್ಞತಾ ಪೂರ್ವಕ ಸ್ಮರಿಸುತ್ತಾರೆ.

ಐದು ವಿಷಯಗಳಲ್ಲಿ ಡಾಕ್ಟರೇಟ್ ಪಡೆದು ಅಧ್ಯಾಪಕ ವೃತ್ತಿಯಲ್ಲಿ ಮುನ್ನಡೆಯಬೇಕೆಂಬುದು ಜಲಾಲುದ್ದೀನ್ ಅವರ ನಿರ್ಧಾರವಾಗಿದೆ.

ಕೇರಳದ ಕುಂಡೂರು ಸಮೀಪದ ಅತ್ತಾಣಿ ಎಂಬಲ್ಲಿನ ನಿವಾಸಿಯಾಗಿರುವ ಜಲಾಲುದ್ದೀನ್ ಬಾಲ್ಯದಲ್ಲಿ ಅಲ್ಪಸ್ವಲ್ಪ ದೃಷ್ಟಿ ಸಾಮರ್ಥ್ಯ ಹೊಂದಿದ್ದರು. ಬೆಳೆದಂತೆ ಸಂಪೂರ್ಣ ದೃಷ್ಟಿ ಕಳೆದುಕೊಂಡರು. ಆದರೂ ಎದೆಗುಂದದ ಅವರು ಶಿಕ್ಷಣವನ್ನು ಮುಂದುವರಿಸಿ ಸಾಧನೆ ಮೆರೆದಿದ್ದಾರೆ.

ವರದಿ : ಎ.ಕೆ. ನಂದಾವರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News