×
Ad

ಏಕತಾ ಪ್ರತಿಮೆಯ ಟಿಕೆಟ್ ಮಾರಾಟದಿಂದ ಸಂಗ್ರಹವಾದ 5 ಕೋಟಿ ರೂ. ವಂಚನೆ: ಪೊಲೀಸ್

Update: 2020-12-02 20:08 IST

ಹೊಸದಿಲ್ಲಿ, ಡಿ. 2: ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿರುವ ಏಕತಾ ಪ್ರತಿಮೆಯ ಟಿಕೆಟ್ ಮಾರಾಟದಿಂದ ಸಂಗ್ರಹವಾಗಿದ್ದ 5.24 ಕೋಟಿ ರೂಪಾಯಿಯನ್ನು ವಂಚಿಸಿರುವ ಆರೋಪಕ್ಕೆ ಸಂಬಂಧಿಸಿ ನಗದು ಸಂಗ್ರಹ ಏಜೆನ್ಸಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಈ ಪ್ರತಿಮೆಯನ್ನು ಏಕತಾ ಪ್ರತಿಮೆ ಎಂದು ಕರೆಯಲಾಗುತ್ತದೆ. 2018 ಅಕ್ಟೋಬರ್‌ನಲ್ಲಿ ಈ ಪ್ರತಿಮೆ ಉದ್ಘಾಟನೆಯಾದ ಬಳಿಕ ಅದು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿದೆ. ನರ್ಮದಾ ಜಿಲ್ಲೆಯ ಕೇವಾಡಿಯದಲ್ಲಿರುವ ಏಕತಾ ಪ್ರತಿಮೆ ಮ್ಯಾನೇಜ್‌ಮೆಂಟ್ ಕಳೆದ ಒಂದೂವರೆ ವರ್ಷಗಳಿಂದ ಟಿಕೆಟ್ ಮೂಲಕ ಸಂಗ್ರಹಿಸಿದ ಹಣವನ್ನು ವಡೋದರಾದ ಖಾಸಗಿ ಬ್ಯಾಂಕ್ ನೇಮಕ ಮಾಡಿದ ನಗದು ಸಂಗ್ರಹ ಏಜೆನ್ಸಿಗೆ ಹಸ್ತಾಂತರಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಜೆನ್ಸಿಯ ಕೆಲವು ಸಿಬ್ಬಂದಿ ಬ್ಯಾಂಕ್‌ನಲ್ಲಿರುವ ಏಕತಾ ಪ್ರತಿಮೆಯ ಪ್ರಾಧಿಕಾರದ ಖಾತೆಗೆ ರೂ. 5,24,77,375 ಅನ್ನು ಜಮಾ ಮಾಡಿಲ್ಲ ಎಂದು ಪೊಲೀಸ್ ಉಪ ಅಧೀಕ್ಷಕ ವಾನಿ ದುಹಾತ್ ತಿಳಿಸಿದ್ದಾರೆ.

ನಗದು ಸಂಗ್ರಹ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಅನಾಮಿಕ ವ್ಯಕ್ತಿಗಳ ವಿರುದ್ಧ ಖಾಸಗಿ ಬ್ಯಾಂಕ್ ಮ್ಯಾನೇಜರ್ ಕೇವಾಡಿಯ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್‌ಐಆರ್ ದಾಖಲಿಸಿದ್ದರು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News