ಇರಾನ್ ವಿಜ್ಞಾನಿಯ ಹತ್ಯೆಯನ್ನು ವಿಶ್ವಸಂಸ್ಥೆ ಖಂಡಿಸುವ ಸಾಧ್ಯತೆಯಿಲ್ಲ: ರಾಜತಾಂತ್ರಿಕರು

Update: 2020-12-02 15:04 GMT

ನ್ಯೂಯಾರ್ಕ್, ಡಿ. 2: ಇರಾನ್‌ನ ಉನ್ನತ ಪರಮಾಣು ವಿಜ್ಞಾನಿ ಮುಹ್ಸಿನ್ ಫಖ್ರಿಝಾದೆಯ ಹತ್ಯೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಖಂಡಿಸುವ ಸಾಧ್ಯತೆಗಳಿಲ್ಲ ಎಂದು ರಾಜತಾಂತ್ರಿಕರು ಹೇಳಿದ್ದಾರೆ.

ವಿಜ್ಞಾನಿಯ ಹತ್ಯೆಯನ್ನು ಖಂಡಿಸಬೇಕು ಹಾಗೂ ಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಹತ್ಯೆಯ ಬೆನ್ನಿಗೇ ಇರಾನ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಒತ್ತಾಯಿಸಿತ್ತು.

ಹೆಚ್ಚೆಂದರೆ, ಶುಕ್ರವಾರ ನಡೆದ ಇರಾನ್ ಪರಮಾಣು ವಿಜ್ಞಾನಿಯ ಹತ್ಯೆಯ ಬಗ್ಗೆ ಚರ್ಚೆ ನಡೆಯಬೇಕೆಂದು ಸದಸ್ಯ ದೇಶವೊಂದು ಮನವಿ ಮಾಡಿದರೆ, 15 ಸದಸ್ಯರ ಭದ್ರತಾ ಮಂಡಳಿಯು ಮುಚ್ಚಿದ ಕೋಣೆಯೊಳಗೆ ಚರ್ಚಿಸಬಹುದಾಗಿದೆ ಹಾಗೂ ಈ ವಿಷಯದ ಬಗ್ಗೆ ಹೇಳಿಕೆಯೊಂದನ್ನು ನೀಡಲು ಸರ್ವಾನುಮತದಿಂದ ಒಪ್ಪಬಹುದಾಗಿದೆ ಎಂದು ರಾಜತಾಂತ್ರಿಕರು ಹೇಳುತ್ತಾರೆ.

ಆದರೆ, ಈ ಹತ್ಯೆಯ ಬಗ್ಗೆ ಚರ್ಚೆ ನಡೆಯಬೇಕೆಂದು ಭದ್ರತಾ ಮಂಡಳಿಯ ಯಾವುದೇ ಸದಸ್ಯ ಮನವಿ ಮಾಡಿಲ್ಲ ಎಂದು ಡಿಸೆಂಬರ್ ತಿಂಗಳಿಗೆ ಮಂಡಳಿಯ ಅಧ್ಯಕ್ಷರಾಗಿರುವ ದಕ್ಷಿಣ ಆಫ್ರಿಕದ ರಾಯಭಾರಿ ಜೆರಿ ಮಾಟ್ಜಿಲ್ಲಾ ಮಂಗಳವಾರ ಹೇಳಿದ್ದಾರೆ.

ವಿಜ್ಞಾನಿಯ ಹತ್ಯೆಯಲ್ಲಿ ಪಾತ್ರವಿಲ್ಲ: ಸೌದಿ ಅರೇಬಿಯ

ರಿಯಾದ್ (ಸೌದಿ ಅರೇಬಿಯ), ಡಿ. 2: ಇರಾನ್‌ನ ಉನ್ನತ ಪರಮಾಣು ವಿಜ್ಞಾನಿ ಮೊಹ್ಸಿನ್ ಫಖ್ರಿಝಾದೆಯ ಹತ್ಯೆಯಲ್ಲಿ ಸೌದಿ ಅರೇಬಿಯ ಪಾತ್ರ ವಹಿಸಿದೆ ಎಂಬ ಇರಾನ್ ವಿದೇಶ ಸಚಿವರ ಆರೋಪದ ಬಗ್ಗೆ ಸೌದಿ ಅರೇಬಿಯದ ವಿದೇಶ ಸಚಿವ ಆದಿಲ್ ಅಲ್-ಜುಬೈರ್ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವೆ ಸೌದಿ ಅರೇಬಿಯದಲ್ಲಿ ನಡೆದ ರಹಸ್ಯ ಸಭೆಯಲ್ಲಿ ಇರಾನ್ ವಿಜ್ಞಾನಿಯನ್ನು ಹತ್ಯೆಗೈಯಲು ಪಿತೂರಿ ಹೂಡಲಾಗಿದೆ ಎಂಬುದಾಗಿ ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್ ಸೋಮವಾರ ಆರೋಪಿಸಿದ್ದರು.

‘‘ಇರಾನ್‌ನಲ್ಲಿ ಏನೇ ಅವಘಡ ನಡೆದರೂ ಇರಾನ್ ವಿದೇಶ ಸಚಿವರು ಸೌದಿ ಅರೇಬಿಯವನ್ನು ದೂಷಿಸುತ್ತಾರೆ. ಅಲ್ಲಿ ಮುಂದೆ ಭೂಕಂಪ ಮತ್ತು ಪ್ರವಾಹ ನಡೆದರೆ ಅವರು ಸೌದಿ ಅರೇಬಿಯವನ್ನು ದೂರುತ್ತಾರೆಯೇ?’’ ಎಂದು ಆದಿಲ್ ಅಲ್-ಜುಬೈರ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News