ಎಲ್ಲ ವಿಚಾರಣಾ ಕೊಠಡಿಗಳು, ಲಾಕಪ್‌ಗಳಲ್ಲಿ ಆಡಿಯೋ ಜೊತೆ ಸಿಸಿಟಿವಿ ಸ್ಥಾಪನೆ: ಸುಪ್ರೀಂ ಕೋರ್ಟ್ ನಿರ್ದೇಶ

Update: 2020-12-02 16:54 GMT

ಹೊಸದಿಲ್ಲಿ,ಡಿ.2: ಕಸ್ಟಡಿಯಲ್ಲಿ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಬುಧವಾರ ಐತಿಹಾಸಿಕ ಆದೇಶವೊಂದನ್ನು ಹೊರಡಿಸಿರುವ ಸರ್ವೋಚ್ಚ ನ್ಯಾಯಾಲಯವು ದೇಶದ ಎಲ್ಲ ಪೊಲೀಸ್ ಠಾಣೆಗಳು , ಸಿಬಿಐ,ಎನ್‌ಐಎ ಹಾಗೂ ಈ.ಡಿ.ಸೇರಿದಂತೆ ತನಿಖಾ ಸಂಸ್ಥೆಗಳು ನೈಟ್ ವಿಷನ್ ಮತ್ತು ಆಡಿಯೋ ರೆಕಾರ್ಡಿಂಗ್ ಸಹಿತ ಸಿಸಿಟಿವಿಗಳನ್ನು ಸ್ಥಾಪಿಸಬೇಕು ಎಂದು ತಿಳಿಸಿದೆ.

 ರಾಜ್ಯಗಳು ಎಲ್ಲ ಪೊಲೀಸ್ ಠಾಣೆಗಳಲ್ಲಿ ಆಡಿಯೊದೊಂದಿಗೆ ಕ್ಯಾಮರಾಗಳನ್ನು ಸ್ಥಾಪಿಸಬೇಕು ಮತ್ತು ಈ ಭದ್ರತಾ ಕ್ಯಾಮೆರಾಗಳು ವಿಚಾರಣಾ ಕೊಠಡಿಗಳು,ಲಾಕಪ್‌ಗಳು,ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಗೋಚರತೆಯನ್ನು ಹೊಂದಿರಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

 ಹೆಚ್ಚಿನ ಏಜೆನ್ಸಿಗಳು ತಮ್ಮ ಕಚೇರಿಗಳಲ್ಲಿಯೇ ವಿಚಾರಣೆಯನ್ನು ನಡೆಸುತ್ತಿವೆ. ಹೀಗಾಗಿ ಪೊಲೀಸ್ ಠಾಣೆಗಳಂತೆ ಇಂತಹ ವಿಚಾರಣೆಗಳನ್ನು ನಡೆಸುವ ಮತ್ತು ಆರೋಪಿಗಳನ್ನು ಇರಿಸಲಾಗುವ ಎಲ್ಲ ಕಚೇರಿಗಳಲ್ಲಿ ಸಿಸಿಟಿವಿಗಳನ್ನು ಕಡ್ಡಾಯವಾಗಿ ಸ್ಥಾಪಿಸಬೇಕು. ಈ ಆದೇಶವು ಮಾದಕದ್ರವ್ಯ ನಿಯಂತ್ರಣ ಘಟಕ(ಎನ್‌ಸಿಬಿ), ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮತ್ತು ಗಂಭೀರ ಅಪರಾಧ ತನಿಖಾ ಕಚೇರಿ (ಎಸ್‌ಎಫ್‌ಐಒ)ಗಳಿಗೂ ಅನ್ವಯಿಸುತ್ತದೆ ಎಂದಿರುವ ನ್ಯಾಯಾಲಯವು,ಎಲ್ಲ ಪೊಲೀಸ್ ಠಾಣೆಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ಲಾಕಪ್‌ಗಳು, ಮೊಗಸಾಲೆಗಳು,ಎಸ್‌ಐ ಮತ್ತು ಇನ್ಸ್‌ಪೆಕ್ಟರ್‌ಗಳ ಕೊಠಡಿಗಳು ಮತ್ತು ರಿಸೆಪ್ಶನ್‌ಗಳಲ್ಲಿ ಹಾಗೂ ವಾಷ್‌ರೂಮ್‌ಗಳ ಹೊರಗೆ ಈ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ತಿಳಿಸಿದೆ.

 ಅಗತ್ಯವಿದ್ದರೆ ಆಡಿಯೊ ರೆಕಾರ್ಡಿಂಗ್‌ಗಳನ್ನು ಸಾಕ್ಷಾಧಾರಕ್ಕಾಗಿ 18 ತಿಂಗಳು ಉಳಿಸಿಕೊಳ್ಳಬೇಕು ಎಂದು ತಿಳಿಸಿರುವ ಸರ್ವೋಚ್ಚ ನ್ಯಾಯಾಲಯವು,ಆರು ವಾರಗಳಲ್ಲಿ ತನ್ನ ಆದೇಶವನ್ನು ಪಾಲಿಸಲು ಕ್ರಿಯಾ ಯೋಜನೆಯನ್ನು ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

ತನ್ನ ನಿರ್ದೇಶಗಳು ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯ ಮೂಲಭೂತ ಹಕ್ಕನ್ನು ಒದಗಿಸಿರುವ ಸಂವಿಧಾನದ 21ನೇ ವಿಧಿಗೆ ಅನುಗುಣವಾಗಿವೆ ಎಂದು ಅದು ತಿಳಿಸಿದೆ.

ಪಂಜಾಬಿನಲ್ಲಿ ಕಸ್ಟಡಿ ಸಾವಿನ ಪ್ರಕರಣವೊಂದರ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದ್ದು,2018ರಲ್ಲಿ ಅದು ಆದೇಶಿಸಿದ್ದಂತೆ ಈ ಕಚೇರಿಗಳಲ್ಲಿ ಭದ್ರತಾ ಕ್ಯಾಮರಾಗಳನ್ನು ಸ್ಥಾಪಿಸಲಾಗಿಲ್ಲ ಎನ್ನುವುದು ಬಯಲಾಗಿತ್ತು.

ಕಸ್ಟಡಿಯಲ್ಲಿ ಹಿಂಸೆಯ ದೂರುಗಳ ವಿಚಾರಣೆ ನಡೆಸಲು ಪ್ರತಿ ಜಿಲ್ಲೆಯಲ್ಲಿ ಮಾನವ ಹಕ್ಕುಗಳ ನ್ಯಾಯಾಲಯವನ್ನು ಸ್ಥಾಪಿಸುವಂತೆಯೂ ಸರ್ವೋಚ್ಚ ನ್ಯಾಯಾಲಯವು ರಾಜ್ಯಗಳಿಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News