ಗಲ್ವಾನ್ ಘರ್ಷಣೆ ಚೀನಾದ ಪೂರ್ವ ಯೋಜಿತ ಸಂಚು: ಅಮೆರಿಕ ಕಾಂಗ್ರೆಸ್ ಆಯೋಗದ ವರದಿ

Update: 2020-12-02 17:11 GMT

ಹೊಸದಿಲ್ಲಿ,ಡಿ.21: ಈ ವರ್ಷದ ಜೂನ್‌ನಲ್ಲಿ ಪೂರ್ವ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯು ಚೀನಾ ಸರಕಾರದ ಪೂರ್ವಯೋಜಿತ ಸಂಚಾಗಿತ್ತೆಂದು ಅಮೆರಿಕ ಕಾಂಗ್ರೆಸ್ ಆಯೋಗವು ತನ್ನ ವರದಿಯಲ್ಲಿ ತಿಳಿಸಿದೆ. ಸಾಕಷ್ಟು ಸಾವುನೋವುಗಳನ್ನು ಉಂಟು ಮಾಡುವುದೇ ಅದರ ದುರುದ್ದೇಶವಾಗಿತ್ತೆಂದು ಅದು ಹೇಳಿದೆ.

 ತನ್ನ ನೆರೆಹೊರೆಯ ರಾಷ್ಟ್ರಗಳ ವಿರುದ್ಧ ಚೀನಾವು ಹಲವಾರು ವರ್ಷಗಳಿಂದ ಬೆದರಿಕೆಯ ಅಭಿಯಾನವನ್ನು ನಡೆಸುತ್ತಾ ಬಂದಿದ್ದು, ಜಪಾನ್‌ನಿಂದ ಹಿಡಿದು ಭಾರತ ಮತ್ತು ಆಗ್ನೇಯ ಏಶ್ಯದ ರಾಷ್ಟ್ರಗಳ ಜೊತೆ ಮಿಲಿಟರಿ ಉದ್ವಿಗ್ನತೆಯನ್ನು ಪ್ರಚೋದಿಸುತ್ತಿದೆ ಎಂದು ಮಂಗಳವಾರ ಪ್ರಕಟವಾದ ವರದಿ ತಿಳಿಸಿದೆ.

 2020ನೇ ಇಸವಿಯು ಚೀನಾ-ಭಾರತ ಬಾಂಧವ್ಯವ ದಶಕಗಳಲ್ಲೇ ಅತ್ಯಂತ ಕೆಟ್ಟ ವರ್ಷವಾಗಿ ಪರಿಣಮಿಸಿದೆ ಎಂದು ಅಮೆರಿಕ-ಚೀನಾ ಆರ್ಥಿಕ ಹಾಗೂ ಭದ್ರತಾ ಪರಾಮರ್ಶನಾ ಆಯೋಗವು ಅಮೆರಿಕ ಕಾಂಗ್ರೆಸ್‌ಗೆ ಸಲ್ಲಿಸಿದ ವರದಿಯಲ್ಲಿ ಬೆಟ್ಟು ಮಾಡಿದೆ.

    ಜೂನ್‌ನಲ್ಲಿ ನಡೆದ ಗಲ್ವಾನ್ ಸಂಘರ್ಷವು, 1975ರ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಎರಡೂ ಕಡೆಯ ಸೈನಿಕರ ಸಾವು,ನೋವಿಗೆ ಕಾರಣವಾಗಿದೆಯೆಂದು ವರದಿ ತಿಳಿಸಿದೆ. ಶಾಂತಿಕಾಲದಲ್ಲಿ ಚೀನಾ ಕಮ್ಯೂನಿಸ್ಟ್ ಪಕ್ಷ(ಸಿಸಿಪಿ)ವು ತನ್ನ ಸಶಸ್ತ್ರ ಪಡೆಗಳನ್ನು ಬೆದರಿಕೆಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದು, ತೈವಾನ್ ಮತ್ತು ದಕ್ಷಿಣ ಚೀನಾ ಸಾಗರಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಸಮರಾಭ್ಯಾಸಗಳನ್ನು ನಡೆಸಿ ಭೀತಿ ಮೂಡಿಸಲು ಯತ್ನಿಸುತ್ತಿದೆ ಎಂದು ವರದಿಯು ಹೇಳಿದೆ.

ಸುಮಾರು ಅರ್ಧಶತಮಾನದ ಬಳಿಕ ಇದೇ ಮೊದಲ ಬಾರಿಗೆ ಚೀನಾದ ಕಮ್ಯೂನಿಸ್ಟ್ ಆಡಳಿತವು ಭೀಕರವಾದ ಸಂಘರ್ಷಕ್ಕೆ ಪ್ರಚೋದನೆ ನೀಡಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪೂರ್ವ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಿ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಸುಮಾರು 20 ಮಂದಿ ಭಾರತೀಯ ಯೋಧರು ಸಾವನ್ನಪ್ಪಿದ್ದರು.

ಗಲ್ವಾನ್ ಸಂಘರ್ಷದ ಬಳಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯ ವಿವಿಧ ಸೆಕ್ಟರ್‌ಗಳಲ್ಲಿ ಮೇ ತಿಂಗಳ ಆರಂಭದಿಂದ ಮೊದಲ್ಗೊಂಡು ಹಲವು ಸಲ ಸೇನಾ ಉದ್ವಿಗ್ನತೆಯುಂಟಾಗಿತ್ತು ಎಂದು ವರದಿ ಗಮನಸೆಳೆದಿದೆ.

ಗಲ್ವಾನ್ ಕಣಿವೆಯ ಸಂಘರ್ಷವು ಚೀನಿ ಸರಕಾರದಿಂದ ಪೂರ್ವ ನಿಯೋಜಿತ ಸಂಚಾಗಿತ್ತೆಂಬುದನ್ನು ಕೆಲವು ಪುರಾವೆಗಳು ಸೂಚಿಸುತ್ತವೆ. ಘರ್ಷಣೆಯಲ್ಲಿ ಸಾವು, ನೋವುಗಳುಂಟಾಗುವುದನ್ನು ಅದು ಬಯಸಿತ್ತು. ಉದಾಹರಣೆಗೆ ಗಲ್ವಾನ್ ಸಂಘರ್ಷಕ್ಕೆ ಹಲವಾರು ವಾರಗಳ ಮೊದಲು ಚೀನಾದ ರಕ್ಷಣಾ ಸಚಿವರು ನೀಡಿದ ಹೇಳಿಕೆಯೊಂದರಲ್ಲಿ, ಸ್ಥಿರತೆಯನ್ನು ಉತ್ತೇಜಿಸಲು ಕದನವನ್ನು ಬಳಸಿಕೊಳ್ಳಬೇಕೆಂದು ಚೀನಿ ಸರಕಾರಕ್ಕೆ ಕರೆ ನೀಡಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News