ಮಂಗಳೂರು ನಗರದಲ್ಲೆಲ್ಲಾ ರಸ್ತೆ ಕಾಮಗಾರಿ: ವಾಹನಗಳ ಟೋಯಿಂಗ್‌ಗೆ ತಾತ್ಕಾಲಿಕ ತಡೆಗೆ ಒತ್ತಾಯ

Update: 2020-12-02 17:23 GMT

ಮಂಗಳೂರು, ಡಿ.2: ನಗರದ ಪ್ರಮುಖ ರಸ್ತೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ವಾಹನ ನಿಲುಗಡೆಗೆ ಜಾಗವಿಲ್ಲದಾ ಗಿದೆ. ಈ ನಡುವೆ ಸಂಚಾರಿ ಪೊಲೀಸರು ದ್ವಿಚಕ್ರ ವಾಹನಗಳನ್ನೆ ಟಾರ್ಗೆಟ್ ಮಾಡಿ ಟೋಯಿಂಗ್ ವಾಹನದ ಮೂಲಕ ವಾಹನಗಳನ್ನು ಸಾಗಿಸಿ ಭಾರೀ ದಂಡ ವಿಧಿಸುತ್ತಿರುವುದು ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂಬ ಆಕ್ರೋಶದ ನುಡಿಗಳು ಮಂಗಳೂರು ಮಹಾನಗರ ಪಾಲಿಕೆು ಸಾಮಾನ್ಯ ಸಭೆಯಲ್ಲಿ ಕೇಳಿ ಬಂತು.

ಉಪ ಮೇಯರ್ ವೇದವಾತಿ ಯಾನೆ ಜಾನಕಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪಾಲಿಕೆ ಸದಸ್ಯ ಪ್ರವೀಣ್‌ಚಂದ್ರ ಆಳ್ವ, ರಸ್ತೆ ಅಗಲೀಕರಣ, ಒಳಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳಿಂದಾಗಿ ಅರ್ಧಕ್ಕರ್ಧ ನಗರವೇ ಬಂದ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಟ್ರಾಫಿಕ್ ಪೊಲೀಸರು ಯಾವುದೇ ಮುನ್ಸೂಚನೇ ನೀಡದೆ ದ್ವಿಚಕ್ರ ವಾಹನಗಳನ್ನು ಟೋಯಿಂಗ್ ಮಾಡುತ್ತಿದ್ದಾರೆ. ಕೊರೋನಾದ ಈ ಸಂಕಷ್ಟ ಕಾಲದಲ್ಲಿ 1600 ರೂ. ದಂಡ ಪಾವತಿಸಲು ಸಾಧ್ಯವಾಗದೆ ಜನರು ಒದ್ದಾಡುತ್ತಿದ್ದಾರೆ. ಸದ್ಯ ನಗರದಲ್ಲಿ ಕಾಮಗಾರಿ ಪೂರ್ಣಗೊಳ್ಳುವವರಗೆ ಟೋಯಿಂಗ್ ವ್ಯವಸ್ಥೆ ಸ್ಥಗಿತಗೊಳಿಸಬೇಕು. ಮನಪಾ ಸಭೆಗೆ ಎಸಿಪಿ ಅಥವಾ ಅದಕ್ಕಿಂತ ಮೇಲ್ದರ್ಜೆಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿರಬೇಕು ಎಂದು ಆಗ್ರಹಿಸಿದರು.

ಟೋಯಿಂಗ್ ವಾಹನದ ಕಾರ್ಯಾಚರಣೆಗೆ ಸದ್ಯಕ್ಕೆ ತಡೆಯೊಡ್ಡಬೇಕು. ತಕ್ಷಣ ಮೇಯರ್ ಅಧ್ಯಕ್ಷತೆಯಲ್ಲಿ ಹಿರಿಯ ಸಂಚಾರ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಸಭೆ ಕರೆಯಬೇಕು ಎಂದು ಸದಸ್ಯರಾದ ಅನಿಲ್ ಕುಮಾರ್, ವಿನಯರಾಜ್ ದನಿಗೂಡಿಸಿದರು.

ಅನಾರೋಗ್ಯದಿಂದ ಗುಣಮುಖರಾಗಿ ಮೇಯರ್ ಬಂದಾಕ್ಷಣ ಈ ಕುರಿತು ಕ್ರಮ ವಹಿಸುವುದಾಗಿ ಉಪ ಮೇಯರ್ ವೇದಾವತಿ ತಿಳಿಸಿದರು.

ಸೆಂಟ್ರಲ್ ಮಾರುಕಟ್ಟೆ ಕೆಡವಲು ಮತ್ತೆ ಕಾರ್ಯಸೂಚಿ ಮಂಡನೆ

ಪಾಲಿಕೆ ಅಧೀನದ ಸೆಂಟ್ರಲ್ ಮಾರುಕಟ್ಟೆಯ ಹಳೆಯ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಹೊಸ ಮಾರುಕಟ್ಟೆ ಸಂಕೀರ್ಣವನ್ನು ನಿರ್ಮಿಸುವ ಸಲುವಾಗಿ ಹಳೆ ಕಟ್ಟಡಗಳನ್ನು ಕೆಡಹುವ ಕುರಿತಾದ ಕಾರ್ಯಸೂಚಿಯನ್ನು ಇಂದಿನ ಸಾಮಾನ್ಯ ಸಭೆಯಲ್ಲಿ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮಂಡಿಸಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಅಬ್ದುಲ್ ರವೂಫ್, 8 ತಿಂಗಳ ಹಿಂದೆ ಕೊರೋನ ನೆಪದಲ್ಲಿ ಸೆಂಟ್ರಲ್ ಮಾರುಕಟ್ಟೆಯನ್ನು ಬಂದ್ ಮಾಡಿದ್ದರಿಂದ 470 ಮಂದಿ ವ್ಯಾಪಾರಸ್ಥರು ಮಾತ್ರವಲ್ಲದೆ, ಮಾರುಕಟ್ಟೆಗೆ ಸಂಬಂಧಿಸಿದ ಸಾವಿರಾರು ಕೂಲಿ ಕಾರ್ಮಿಕರು, ಕಾರ್ಮಿಕ ವರ್ಗದವರು ಈಗಾಗಲೇ ಬೀದಿ ಪಾಲಾಗಿದ್ದಾರೆ. ವರ್ಷವೊಂದಕ್ಕೆ ಮನಪಾಕ್ಕೆ ಮಾರುಕಟ್ಟೆಯಿಂದ ಬರುತ್ತಿದ್ದ ಕೋಟಿ ರೂ. ಆದಾಯವೂ ಇಲ್ಲವಾಗಿದೆ. ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಅಭ್ಯಂತರ ಇಲ್ಲ. ಆದರೆ ಅಲ್ಲಿದ್ದ ವ್ಯಾಪಾರಿಗಳಿಗೆ ಪರ್ಯಾಯ ವ್ಯವ್ಥೆಯಾಗಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಪ್ರತಿಕ್ರಿಯಿಸಿ, ಈಗಾಗಲೇ ಸೆಂಟ್ರಲ್ ಮಾರುಕಟ್ಟೆಯ ಟೆಂಡರ್ ಪಡೆದವರ ಅವಧಿ ಮುಗಿದಿದೆ. ವ್ಯಾಪಾರ ಪರವಾನಿಗೆ ಇರುವವರು ವ್ಯಾಪಾರ ಮಾಡುತ್ತಿದ್ದಾರೆ ಎಂದರು.

ನಗರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಅಳವಡಿಸಿರುವ ಶೇ.90ರಷ್ಟು ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಇತ್ತೀಚೆಗೆ ಗೋಡೆ ಬರಹದ ಮೂಲಕ ಬೆದರಿಕೆಯೊಡ್ಡಿದ ದುಷ್ಕರ್ಮಿಗಳ ಪತ್ತೆ ಕಷ್ಟಸಾಧ್ಯವಾಗುತ್ತಿದೆ. ಇದು ಅತ್ಯಂತ ಗಂಭೀರ ವಿಚಾರ. ಪಾಲಿಕೆಯಿಂದ ನಿಗದಿತ ಮೊತ್ತವನ್ನು ಸಿಸಿ ಕ್ಯಾಮೆರಾ ಅಳವಡಿಸಲು ಪಾವತಿಸಲಾಗಿದೆ. ಆದರೆ ನಿರ್ವಹಣೆ ಸರಿ ಇಲ್ಲವೆಂದರೆ ಏನರ್ಥ ? ಪೊಲೀಸ್ ಇಲಾಖೆಯ ಲೋಪದ ಕುರಿತು ಸರಕಾರದ ಗಮನ ಸೆಳೆಯಬೇಕು ಎಂದು ಎ.ಸಿ.ವಿನಯರಾಜ್ ಗಮನ ಸೆಳೆದರು.

ತುಂಬೆಯಿಂದ ನಗರದ 6 ಲಕ್ಷ ಜನರಿಗೆ ಪೂರೈಕೆಯಾಗುತ್ತಿರುವ ನೀರು ಶುದ್ದವಾಗಿಲ್ಲ. ಅದರಲ್ಲಿ ಮಲಮೂತ್ರ ಮಿಸ್ರಿತವಾಗಿರುವುದು ಎಕ್ಕೂರಿನ ಮೀನುಗಾರಿಕಾ ಕಾಲೇಜಿನಲ್ಲಿ ನಡೆಸಲಾದ ಪರೀಕ್ಷೆಯಿಂದ ತಿಳಿದು ಬಂದಿದೆ. ಇದು ನಗರದ ನಾಗರಿಕರ ಆರೋಗ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ವಿಯರಾಜ್ ಸಭೆಯಲ್ಲಿ ಪ್ರಸ್ತಾಪಿಸಿದರು.

ಈ ಬಗ್ಗೆ ಸದಸ್ಯರ ನಡುವೆ ಕೆಲ ಸಮಯ ಚರ್ಚೆ ನಡೆದ ಬಳಿಕ ಆಯುಕ್ತ ಅಕ್ಷಯ್ ಶ್ರೀಧರ್ ಪ್ರತಿಕ್ರಿಯಿಸಿ, ಈ ಬಗ್ಗೆ ತನಿಖೆ ನಡೆಸಿ, ನಿಜವಾಗಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ತಮ್ಮ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಹದಗೆಟ್ಟಿದೆ. ಈ ಬಗ್ಗೆ ಕಳೆದ ಒಂದು ವರ್ಷದಿಂದ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದರೂ ಸಮಸ್ಯೆ ಪರಿಹರಿಸಲಾಗುತ್ತಿಲ್ಲ ಎಂದು ಸದಸ್ಯೆ ಸಂಶಾದ್ ಶಂಸುದ್ದೀನ್ ಸಭೆಯಲ್ಲಿ ಆಕ್ಷೇಪಿಸಿದರು. ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳುವುದಾಗಿ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದರು.

ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಗದೀಶ್ ಶೆಟ್ಟಿ, ಪೂರ್ಣಿಮಾ, ಶರತ್ ಕುಮಾರ್, ಕಿರಣ್ ಕುಮಾರ್ ಉಪಸ್ಥಿತರಿದ್ದರು.

ವಾಗ್ವಾದಕ್ಕೆ ಕಾರಣವಾದ ರಸ್ತೆ ನಾಮಕರಣ!

ಕಾರ್ಯಸೂಚಿ ಮಂಡನೆಯ ವೇಳೆ, ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್‌ಗೆ ಬ್ರಹ್ಮಶ್ರೀ ನಾರಾಯಣ ಗುರು ದೇವ ಸ್ಟೇಷನ್ ಎಂದು ನಾಮ ಕರಣ ಮಾಡಬೇಕು. ಈ ಕುರಿತು ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಬೇಕು ಎಂದು ವಿಪಕ್ಷ ನಾಯಕ ಅಬ್ದುಲ್ ರವೂಫ್ ಮನವಿ ಮಾಡಿದ ಸಂದರ್ಭ, ನಗರದ ರಸ್ತೆಯೊಂದಕ್ಕೆ ನಾರಾಯಣಗುರು ಹೆಸರಿಡಲು ವಿಪಕ್ಷ ಸದಸ್ಯರು ಆಕ್ಷೇಪಿಸಿದ್ದಾರೆಂಬ ಆರೋಪವನ್ನು ಸದಸ್ಯ ಸುಧೀರ್ ಶೆಟ್ಟಿ ಮಾಡುತ್ತಿರುವಂತೆಯೇ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ವಿಪಕ್ಷ ನಾಯಕರ ಮನವಿಯನ್ನು ಬೆಂಬಲಿಸುತ್ತಾ ಮಾತು ಆರಂಭಿಸಿದ ಸುಧೀರ್ ಶೆಟ್ಟಿ, ಸಮಾಜ ಸುಧಾರಕರಾದ ನಾರಾಯಣ ಗುರುಗಳ ಹೆಸರನ್ನು ಅವಶ್ಯವಾಗಿ ಇಡಬೇಕು. ಇದರಲ್ಲಿ ಎರಡು ಮಾತಿಲ್ಲ. ಆದರೆ ಸ್ಥಾಯಿ ಸಮಿತಿ ಸಭೆಯಲ್ಲಿ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರುಗಳ ಹೆಸರು ಇಡುವ ಪ್ರಸ್ತಾಪಕ್ಕೆ ವಿಪಕ್ಷದ ಸದಸ್ಯರೊಬ್ಬರು ವಿರೋಧಿಸಿದ್ದಾರೆ. ಆಕ್ಷೇ ಪತ್ರವನ್ನೂ ನೀಡಿದ್ದಾರೆ ಎಂದರು.

ಈ ಸಂದರ್ಭ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ಆರಂಭವಾಯಿತು. ವಿಪಕ್ಷ ನಾಯಕ ಅಬ್ದುಲ್ ರವೂಫ್ ಮಾತನಾಡಲೆತ್ನಿಸುತ್ತಾ, ವಿರೋಧ ವ್ಯಕ್ತಪಡಿಸಿಲ್ಲ ಎಂದಾಗ, ಆಡಳಿತ ಪಕ್ಷದ ಸದಸ್ಯರನೇಕರು ಒಟ್ಟಾಗಿ ಪ್ರತಿಕ್ರಿಯಿಸುತ್ತಾ, ವಿಪಕ್ಷದ ಸದಸ್ಯರು ವಿರೋಧಿಸಿಲ್ಲವೇ ಎಂಬುದನ್ನು ಸ್ಥಾಯಿ ಸಮಿತಿ ಅಧ್ಯಕ್ಷರು ಉತ್ತರಿಸಬೇಕೆಂದರು. ಸದಸ್ಯ ವಿನಯ್ ರಾಜ್ ಸ್ಪಷ್ಟೀಕರಣ ನೀಡಲು ಅವಕಾಶ ನೀಡಬೇಕೆಂದರು. ಈ ನಡುವೆ, ವಿಪಕ್ಷ ಸದಸ್ಯರು ಆಕ್ಷೇಪದ ಕುರಿತಂತೆ ಮನವಿಯನ್ನು ಸದನದಲ್ಲಿ ಓದಿ ಹೇಳಿ ಎಂದು ಒತ್ತಾಯಿಸುತ್ತಿರು ವಂತೆಯೇ ಸದನದಲ್ಲಿ ಪರಸ್ಪರ ಏರುಧ್ವನಿಗಳಲ್ಲಿ ವಾಗ್ವಾದ ಆರಂಭವಾಯಿತು. ಈ ಸಂದರ್ಭ ವಿಪಕ್ಷ ಸದಸ್ಯರಾದ ಶಶಿಧರ ಹೆಗ್ಡೆ, ಭಾಸ್ಕರ ಮೊಯಿಲಿ, ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್, ನವೀನ್ ಡಿಸೋಜ ಸೇರಿದಂತೆ ಇತರ ಸದಸ್ಯರು ಸದನದ ಬಾವಿಗಿಳಿದು ವಾಗ್ವಾದ ಆರಂಭಿಸಿದಾಗ, ಆಡಳಿತ ಪಕ್ಷದ ಸದಸ್ಯರೂ ವಾಗ್ವಾದ ನಡೆಸಿದರು.

ಈ ಸಂದರ್ಭ ಉಪ ಮೇಯರ್ ಸಭೆಯನ್ನು ಮೊಟಕುಗೊಳಿಸಿ ಹೊರ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News