ಬೆಂಜನಪದವು: ಆಟೋ ರಿಕ್ಷಾ ಪಲ್ಟಿಯಾಗಿ ಮೂರು ದಿನದ ಹಸುಗೂಸು ಮೃತ್ಯು

Update: 2020-12-03 04:35 GMT

ಬಂಟ್ವಾಳ, ಡಿ.3: ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಮೂರು ದಿನದ ಹಸುಗೂಸು ಮೃತಪಟ್ಟಿದ್ದು, ಚಾಲಕ ಸಹಿತ ಇಬ್ಬರು ಮಹಿಳೆಯರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ತಾಲೂಕಿನ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ಬುಧವಾರ ಸಂಜೆ ನಡೆದಿದೆ.

ಗುರುಪುರ - ಕೈಕಂಬ ಮೂಲದ ಉಮೈರಾ ಎಂಬವರು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೂರು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬುಧವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಬಿ.ಸಿ.ರೋಡ್ ಕಡೆ ಬರುವ ಖಾಲಿ ಆ್ಯಂಬುಲೆನ್ಸ್ ನಲ್ಲಿ ಬಂದು ಬಿ.ಸಿ.ರೋಡು - ಕೈಕಂಬದಲ್ಲಿ ಇಳಿದು ಅಲ್ಲಿಂದ ಗೂಡಿನಬಳಿ ನಿವಾಸಿಯೋರ್ವರ ಆಟೋ ರಿಕ್ಷಾದಲ್ಲಿ ಮನೆ ಕಡೆಗೆ ತೆರಳಿದ್ದರು ಎನ್ನಲಾಗಿದೆ.

ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ತಲುಪಿದಾಗ ಚಾಲಕನ ನಿಯಂತ್ರಣದ ತಪ್ಪಿ ಆಟೊ ರಿಕ್ಷಾ ಉರುಳಿ ಬಿದ್ದಿದೆ ಎನ್ನಲಾಗಿದೆ. ಘಟನೆಯಿಂದ ತಾಯಿಯ ಮಡಿಲಲ್ಲಿದ್ದ ಹಸುಗೂಸು ಹೊರಗೆಸೆಯಲ್ಪಟ್ಟು ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ರಿಕ್ಷಾದಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರಿಗೂ ಅಲ್ಪಸ್ವಲ್ಪ ಗಾಯಗಳಾಗಿದ್ದು, ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಉಮೈರಾ ಅವರಿಗೆ ನಾಲ್ವರು ಗಂಡು ಮಕ್ಕಳಿದ್ದು, ಐದನೇ ಹೆರಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News