ಉಗ್ರರ ಪರ ಗೋಡೆ ಬರಹ ಪ್ರಕರಣ: ಓರ್ವ ಶಂಕಿತ ಪೊಲೀಸ್ ವಶಕ್ಕೆ ?

Update: 2020-12-04 12:24 GMT

ಮಂಗಳೂರು: ನಗರದಲ್ಲಿ ಇತ್ತೀಚೆಗೆ ಕಂಡುಬಂದ ಪ್ರಚೋದನಕಾರಿ ಗೋಡೆಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಶಂಕೆಯ ಮೇಲೆ ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಪೊಲೀಸರು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.

ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಮಾಝ್ ಅಹ್ಮದ್ ಪೊಲೀಸ್ ವಶದಲ್ಲಿರುವ ವ್ಯಕ್ತಿ ಎಂದು ತಿಳಿದುಬಂದಿದೆ.

ಮಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್‌ಆಗಿರುವ ಅಹ್ಮದ್ ಎಂಬಾತನನ್ನು ಮಂಗಳೂರು ಪೊಲೀಸರು ಗುರುವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ತೀರ್ಥಹಳ್ಳಿ ನಿವಾಸಿಯಾದ ಈತ ಕಳೆದ ಅಕ್ಟೋಬರ್‌ನಲ್ಲಿ ಮಂಗಳೂರಿನಲ್ಲಿ ಆನ್‌ಲೈನ್ ಕಂಪೆನಿಯಲ್ಲಿ ಫುಡ್ ಡೆಲಿವರಿ ಕೆಲಸಕ್ಕೆ ಸೇರಿಕೊಂಡಿದ್ದನು ಎನ್ನಲಾಗಿದೆ.

ನ.27ರಂದು ಕದ್ರಿಯಲ್ಲಿ ಹಾಗೂ ನ.29ರಂದು ಮಂಗಳೂರು ನ್ಯಾಯಾಲಯ ಗೋಡೆಯಲ್ಲಿ ಪ್ರಚೋದನಕಾರಿ ಬರಹ ಕಾಣಿಸಿದ ಹಿನ್ನೆಲೆಯಲ್ಲಿ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಇದೊಂದು ಗಂಭೀರ ಪ್ರಕರಣವಾದ ಕಾರಣ ದುಷ್ಕರ್ಮಿಗಳ ಪತ್ತೆಗೆ ಪ್ರತ್ಯೇಕ ತನಿಖಾ ತಂಡ ರಚಿಸಲಾಗಿತ್ತು.

ದುಷ್ಕರ್ಮಿಗಳ ಪತ್ತೆಗೆ ಸಾಕಷ್ಟು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ ಪೊಲೀಸರು ಕೊನೆಗೆ ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಅಹ್ಮದ್ ನನ್ನು ಶಂಕೆಯ ಮೇಲೆ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಸಿಸಿಬಿ ಹಾಗೂ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ತಂಡಗಳು ಈತನನ್ನು ಗುರುವಾರ ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿವೆ ಎನ್ನಲಾಗಿದೆ. ಆದರೆ, ಈತನ ಬಂಧನವನ್ನು ಪೊಲೀಸರು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News