ರೈತರ ಪ್ರತಿಭಟನೆಯನ್ನು ಇನ್ನೊಂದು ಶಾಹೀನ್ ಬಾಗ್ ಮಾಡಲು 'ಟುಕ್ಡೆ ಟುಕ್ಡೆ ಗ್ಯಾಂಗ್' ಯತ್ನ

Update: 2020-12-03 09:08 GMT

ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯ ಗಡಿಯಲ್ಲಿ  ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಶಾಹೀನ್ ಬಾಗ್ ರೀತಿಯ ಪ್ರತಿಭಟನೆಯಾಗಿ ಮಾರ್ಪಡಿಸಲು ``ಟುಕ್ಡೆ ಟುಕ್ಡೆ ಗ್ಯಾಂಗ್'' ಪ್ರಯತ್ನಿಸುತ್ತಿದೆ ಎಂದು ದಿಲ್ಲಿಯ ಬಿಜೆಪಿ ಸಂಸದ ಹಾಗೂ ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಮನೋಜ್ ತಿವಾರಿ ಆರೋಪಿಸಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ಕೇಳಿ ಬಂದಿರುವ ಖಲಿಸ್ತಾನ ಪರ ಘೋಷಣೆಗಳು ಹಾಗೂ  ಕೆಲ ಪ್ರತಿಭಟನಾಕಾರರಿಂದ ಪ್ರಧಾನಿಗೆ ಒಡ್ಡಲಾಗಿದೆಯೆನ್ನಲಾದ ಬೆದರಿಕೆಗಳನ್ನು ಗಮನಿಸಿದಾಗ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಇದೊಂದು ಪೂರ್ವಯೋಜಿತ ಸಂಚು ಎಂಬಂತೆ ತೋರುತ್ತದೆ ಎಂದು ತಿವಾರಿ ಆರೋಪಿಸಿದರು.

``ಶಾಹೀನ್ ಬಾಗ್‍ನಲ್ಲಿ ಸಿಎಎ ಹಾಗೂ ಎನ್‍ಆರ್‍ಸಿ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾದವರು ಇಲ್ಲಿಯೂ ಹಾಜರಿರುವುದನ್ನು ಗಮನಿಸಿದರೆ ಟುಕ್ಡೆ ಟುಕ್ಡೆ ಗ್ಯಾಂಗ್ ನವರು ಶಾಹೀನ್ ಬಾಗ್ 2.0 ಸೃಷ್ಟಿಸಲು ಹಾಗೂ ರೈತರ ಪ್ರತಿಭಟನೆಯ ನೆಪದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ'' ಎಂದು ಅವರು ದೂರಿದರು.

``ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ನೈಜ ರೈತರು ಈ ಸತ್ಯವನ್ನು ಅರಿತು ಈ `ಟುಕ್ಡೆ ಟುಕ್ಡೆ' ಗ್ಯಾಂಗ್‍ನ ಉದ್ದೇಶಗಳು ವಿಫಲವಾಗುವಂತೆ ಮಾಡಬೇಕು,'' ಎಂದು ಅವರು ಹೇಳಿದರಲ್ಲದೆ ``ದಿಲ್ಲಿಯ ಹಿಂಸಾಚಾರದ ಸಂಚುಕೋರರು ಇದೀಗ ರೈತರ ಹೆಸರಿನಲ್ಲಿ ದೇಶವ್ಯಾಪಿ  ಹಿಂಸಾಚಾರ ಪ್ರಚೋದಿಸಲು ಸಿದ್ಧಗೊಳ್ಳುತ್ತಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕ ಇಂತಹ  ಯತ್ನವನ್ನು ವಿಫಲಗೊಳಿಸಬೇಕು'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News