ರೈತರ ಸಮಸ್ಯೆ ಶೀಘ್ರವೇ ಬಗೆಹರಿಸಿ: ಅಮಿತ್ ಶಾಗೆ ಅಮರಿಂದರ್ ಆಗ್ರಹ

Update: 2020-12-03 14:22 GMT

ಹೊಸದಿಲ್ಲಿ,ಡಿ.3: ನೂತನ ಕೃಷಿ ಕಾನೂನುಗಳ ಕುರಿತು ಕೇಂದ್ರ ಸರಕಾರ ಮತ್ತು ರೈತರ ನಡುವೆ ಉಂಟಾಗಿರುವ ಬಿಕ್ಕಟ್ಟಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಗುರುವಾರ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಅತ್ತ ವಿಜ್ಞಾನ ಭವನದಲ್ಲಿ ಪ್ರತಿಭಟನಾನಿರತ ರೈತ ನಾಯಕರು ಮತ್ತು ಸರಕಾರದ ನಡುವೆ ಮಾತುಕತೆ ನಡೆದಿದ್ದರೆ,ಇದೇ ವೇಳೆ ಸಿಂಗ್ ಅವರು ಶಾ ನಿವಾಸದಲ್ಲಿ ಅವರನ್ನು ಭೇಟಿಯಾಗಿದ್ದರು.

ಸಿಂಗ್ ಮತ್ತು ಅವರ ಕಾಂಗ್ರೆಸ್ ಪಕ್ಷ ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದು, ಪಂಜಾಬ್ ವಿಧಾನಸಭೆಯು ಕೇಂದ್ರದ ಕೃಷಿ ಕಾನೂನುಗಳನ್ನು ಅನೂರ್ಜಿತಗೊಳಿಸಿ ಮಸೂದೆಗಳನ್ನೂ ಅಂಗೀಕರಿಸಿದೆ.

ಸರ್ವರ ಹಿತಾಸಕ್ತಿಯ ದೃಷ್ಟಿಯಿಂದ ಕೇಂದ್ರ ಮತ್ತು ರೈತರ ನಡುವೆ ಮಾತುಕತೆಗಳಲ್ಲಿ ಮಧ್ಯಸ್ಥಿಕೆ ವಹಿಸಲು ತಾನು ಮತ್ತು ತನ್ನ ಸರಕಾರ ಸಿದ್ಧ ಎಂದು ಸಿಂಗ್ ಈ ಹಿಂದೆ ಹೇಳಿದ್ದರು.

ನೂತನ ಕೃಷಿ ಕಾನೂನುಗಳನ್ನು ಸರಕಾರವು ಹಿಂದೆಗೆದುಕೊಳ್ಳಬೇಕು ಎಂಬ ಬೇಡಿಕೆಯೊಂದಿಗೆ ರೈತರು ದಿಲ್ಲಿಯ ಗಡಿಗಳಲ್ಲಿ ಧರಣಿ ನಡೆಸುತ್ತಿದ್ದು,ಇವರಲ್ಲಿ ಹೆಚ್ಚಿನವರು ಪಂಜಾಬಿನವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News