ಕೃಷಿ ಕಾಯ್ದೆ ಹಿಂಪಡೆಯದಿದ್ದರೆ ರಾಷ್ಟ್ರ ವ್ಯಾಪಿ ಪ್ರತಿಭಟನೆ: ಕೇಂದ್ರ ಸರಕಾರಕ್ಕೆ ಮಮತಾ ಬ್ಯಾನರ್ಜಿ ಎಚ್ಚರಿಕೆ

Update: 2020-12-03 13:59 GMT

ಕೋಲ್ಕತ್ತಾ, ಡಿ. 3: ರೈತ ವಿರೋಧಿ ಕೃಷಿ ಕಾಯ್ದೆಯನ್ನು ಹಿಂಪಡೆಯದೇ ಇದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭಿಸಲಾಗುವುದು ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರಕಾರಕ್ಕೆ ಗುರುವಾರ ಎಚ್ಚರಿಕೆ ನೀಡಿದ್ದಾರೆ.

ಈ ವಿಷಯದ ಕುರಿತಂತೆ ಮಮತಾ ಬ್ಯಾನರ್ಜಿ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವನ್ನು ಸರಣಿ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ‘‘ನನಗೆ ರೈತರು, ಅವರ ಜೀವನ ಹಾಗೂ ಅವರ ಜೀವನೋಪಾಯದ ಬಗ್ಗೆ ತುಂಬಾ ಕಳವಳ ಉಂಟಾಗುತ್ತಿದೆ. ಕೇಂದ್ರ ಸರಕಾರ ರೈತ ವಿರೋಧಿ ಕೃಷಿ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ, ನಾವು ರಾಜ್ಯ ಹಾಗೂ ದೇಶಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ. ಆರಂಭದಿಂದಲೇ ನಾವು ಈ ರೈತ ವಿರೋಧಿ ಮಸೂದೆಯನ್ನು ಕಠಿಣವಾಗಿ ವಿರೋಧಿಸುತ್ತಲೇ ಇದ್ದೆವು’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘‘ನಾವು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಸಭೆಯನ್ನು ಶುಕ್ರವಾರ ಕರೆದಿದ್ದೇವೆ. ಅವಶ್ಯ ಸಾಮಗ್ರಿಗಳ ಕಾಯ್ದೆ ಸಾಮಾನ್ಯ ಜನರ ಮೇಲೆ ಬೀರುತ್ತಿರುವ ಪರಿಣಾಮ ಹಾಗೂ ಬೆಲೆಗಳು ಗಗನಕ್ಕೇರುವ ಬಗ್ಗೆ ಚರ್ಚೆ ನಡೆಸಲಿದ್ದೇವೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ. ‘‘ಕೇಂದ್ರ ಎಲ್ಲವನ್ನೂ ಮಾರಾಟ ಮಾಡುತ್ತಿದೆ. ರೈಲ್ವೆ, ಏರ್ ಇಂಡಿಯಾ, ಕಲ್ಲಿದ್ದಲು, ಬಿಎಸ್‌ಎನ್‌ಎಲ್, ಬಿಎಚ್‌ಇಎಲ್, ಬ್ಯಾಂಕ್, ರಕ್ಷಣೆ ಮೊದಲಾದವುಗಳನ್ನು ಮಾರುವುದು ಸರಿಯಲ್ಲ. ಅಪಕ್ವ ಹೂಡಿಕೆ ಹಿಂದೆಗೆತ ಹಾಗೂ ಖಾಸಗೀಕರಣ ನೀತಿಯನ್ನು ಹಿಂಪಡೆಯಬೇಕು. ನಾವು ನಮ್ಮ ದೇಶದ ಖಜಾನೆಯನ್ನು ಬಿಜೆಪಿಯ ವೈಯುಕ್ತಿಕ ಸೊತ್ತಾಗಲು ಅವಕಾಶ ನೀಡಲಾರೆವು’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News