ಕೃಷಿ ಕಾನೂನುಗಳನ್ನು ವಿರೋಧಿಸಿ ಪದ್ಮಭೂಷಣ ಪ್ರಶಸ್ತಿ ಮರಳಿಸಿದ ಸಂಸದ ಸುಖದೇವ ಧಿಂಡ್ಸಾ

Update: 2020-12-03 14:29 GMT

ಸಂಗ್ರೂರ್(ಪಂಜಾಬ್),ಡಿ.3: ಶಿರೋಮಣಿ ಅಕಾಲಿ ದಳ (ಪ್ರಜಾಸತ್ತಾತ್ಮಕ)ದ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಸುಖದೇವ ಸಿಂಗ್ ಧಿಂಡ್ಸಾ ಅವರು ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಮತ್ತು ರೈತರ ಪ್ರತಿಭಟನೆಗಳನ್ನು ಬೆಂಬಲಿಸಿ ತನ್ನ ಪದ್ಮಭೂಷಣ ಪ್ರಶಸ್ತಿಯನ್ನು ಗುರುವಾರ ಸರಕಾರಕ್ಕೆ ಮರಳಿಸಿದ್ದಾರೆ.

ಶಿರೋಮಣಿ ಅಕಾಲಿ ದಳ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರೊಂದಿಗೆ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಪಕ್ಷವನ್ನು ತೊರೆದಿದ್ದ ಹಿರಿಯ ನಾಯಕ ಧಿಂಡ್ಸಾ ಅವರಿಗೆ 2019ರ ಮಾರ್ಚ್‌ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನಿಸಿದ್ದರು.

‘ರೈತರು ಕಳೆದ ಎರಡು ತಿಂಗಳುಗಳಿಂದಲೂ ಧರಣಿಗಳನ್ನು ನಡೆಸುತ್ತಿದ್ದಾರೆ,ಆದರೆ ಅವರ ಅಹವಾಲಿಗೆ ಕಿವಿಗೊಡಲು ಕೇಂದ್ರ ಸರಕಾರವು ಸಿದ್ಧವಿಲ್ಲ. ಇದನ್ನು ಪ್ರತಿಭಟಿಸಿ ನಾನು ಪದ್ಮಭೂಷಣವನ್ನು ಮರಳಿಸಿದ್ದೇನೆ. ತಮ್ಮ ಪ್ರತಿಭಟನೆಯನ್ನು ದಿಲ್ಲಿ ಗಡಿಗಳಿಗೆ ಸ್ಥಳಾಂತರಿಸಿರುವ ನಮ್ಮ ಹಿರಿಯರನ್ನು ಬಿಜೆಪಿ ಸರಕಾರವು ಕಡೆಗಣಿಸುತ್ತಿರುವಾಗ ಈ ಪ್ರಶಸ್ತಿಗೆ ಯಾವುದೇ ಮೌಲ್ಯವಿಲ್ಲ ’ಎಂದು ಧಿಂಡ್ಸಾ ಸುದ್ದಿಸಂಸ್ಥೆಗೆ ತಿಳಿಸಿದರು.

ತನ್ನ ಪಕ್ಷದ ಕಾರ್ಯಕರ್ತರು ರೈತರನ್ನು ಬೆಂಬಲಿಸುತ್ತಿದ್ದಾರೆ ಮತ್ತು ರೈತರ ಪ್ರತಿಭಟನೆಯಲ್ಲಿ ಪಕ್ಷ ರಾಜಕೀಯವನ್ನು ಚರ್ಚಿಸದಂತೆ ತಾನು ಅವರಿಗೆ ಸೂಚಿಸಿದ್ದೇನೆ ಎಂದರು.

ಸರಕಾರವು ಇಂತಹ ಕರಾಳ ಕಾನೂನುಗಳನ್ನು ಹಿಂದೆಗೆದುಕೊಳ್ಳದಿದ್ದರೆ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News