ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತ ಸಾವು

Update: 2020-12-03 17:12 GMT

ಬಠಿಂಡಾ, ಡಿ. 3: ಕೇಂದ್ರದ ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಹೊಸದಿಲ್ಲಿಯ ಟಿಕ್ರಿ ಗಡಿಯಲ್ಲಿ ಗುರುವಾರ ಪಂಜಾಬ್ ಬಠಿಂಡಾದ ಲಾಲೆಯಾನ ಗ್ರಾಮದ 57 ವರ್ಷದ ರೈತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿದ ರೈತ ಲಖ್‌ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ಇತರ ರೈತರೊಂದಿಗೆ ನವೆಂಬರ್ 26ರಂದು ಡಾಬವಾಲಿಯಿಂದ ಇಲ್ಲಿಗೆ ಆಗಮಿಸಿದ್ದರು. ಸೆಪ್ಟಂಬರ್ ತಿಂಗಳಲ್ಲಿ ಬಾದಲ್ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೂಡ ಅವರು ಪಾಲ್ಗೊಂಡಿದ್ದರು. ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭ ಸಾವನ್ನಪ್ಪಿರುವವರಲ್ಲಿ ಲಖ್‌ಬೀರ್ ಸಿಂಗ್ ಏಳನೆಯವರು.

ಈ ಹಿಂದೆ ದಿಲ್ಲಿಯಿಂದ ಹಿಂದಿರುಗುತ್ತಿದ್ದಾಗ ಕುರುಕ್ಷೇತ್ರದ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ 32 ವರ್ಷದ ರೈತ ಬರ್ಜಿಂದರ್ ಸಿಂಗ್ ಮೃತಪಟ್ಟಿದ್ದರು. ದಿಲ್ಲಿಯತ್ತ ತೆರಳುತ್ತಿದ್ದ ಸಂದರ್ಭ ಭಿವಾನಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇನ್ನೋರ್ವ ರೈತ ಧನ್ನಾ ಸಿಂಗ್ ಸಾವನ್ನಪ್ಪಿದ್ದರು. ಟಿಕ್ರಿ ಗಡಿಯಲ್ಲಿ ಕಾರಿನೊಳಗೆ ನಿದ್ರಿಸುತ್ತಿದ್ದ ಸಂದರ್ಭ ಬೆಂಕಿ ಹತ್ತಿಕೊಂಡು ಮೆಕಾನಿಕ್ ಜನಕ್ ರಾಜ್ (60) ಮೃತಪಟ್ಟಿದ್ದರು. ರೈತ ಗಜ್ಜನ್ ಸಿಂಗ್ ಹೃದಯಾಘಾತದಿಂದ ಮೃತಪಟ್ಟಿದ್ದರು.

ಮಾನಸ ಜಿಲ್ಲೆಯ ಬಚ್ಛೋಹಾನ ಗ್ರಾಮದ 60 ವರ್ಷದ ರೈತ ಗುರ್ಜಂತ್ ಸಿಂಗ್ ಹಾಗೂ ಮೊಗಾದ ಗುರುಬಚನ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಲಖ್‌ಬೀರ್ ಸಿಂಗ್ ರೈತ ಸಂಘಟನೆಯ ಸಕ್ರಿಯ ಸದಸ್ಯ. ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅವರ ಕುಟುಂಬಕ್ಕೆ 5 ಎಕರೆ ಭೂಮಿ ಇದೆ. ಲಖ್‌ಬೀರ್ ಕುಟುಂಬಕ್ಕೆ ಪರಿಹಾರ ನೀಡುವಂತೆ ರೈತ ಸಂಘಟನೆಗಳು ಆಗ್ರಹಿಸಿವೆ ಎಂದು ಬಿಕೆಯು ಏಕ್ತಾ ಉಗ್ರಾಹಾನ್ ಸಂಘಟನೆಯ ಬಠಿಂಡಾ ಜಿಲ್ಲಾ ಕಾರ್ಯದರ್ಶಿ ಹರ್ಜಿಂದರ್ ಸಿಂಗ್ ಬಗ್ಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News