ಟ್ರಂಪ್ ಸರಕಾರದ ಎರಡು ಎಚ್-1ಬಿ ನಿಯಮಗಳಿಗೆ ನ್ಯಾಯಾಲಯದಿಂದ ತಡೆ

Update: 2020-12-03 17:45 GMT

ವಾಶಿಂಗ್ಟನ್, ಡಿ. 3: ವಿದೇಶಿ ಉದ್ಯೋಗಿಗಳನ್ನು ಕೆಲಸಕ್ಕೆ ನೇಮಿಸುವ ಅಮೆರಿಕನ್ ಕಂಪೆನಿಗಳ ಸಾಮರ್ಥ್ಯವನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರವು ಪ್ರಸ್ತಾಪಿಸಿರುವ ಎಚ್-1ಬಿ ವೀಸಾ ನೀಡಿಕೆಗೆ ಸಂಬಂಧಿಸಿದ ಎರಡು ನಿಯಮಗಳಿಗೆ ಅವೆುರಿಕದ ನ್ಯಾಯಾಲಯವೊಂದು ಬುಧವಾರ ತಡೆಯಾಜ್ಞೆ ನೀಡಿದೆ.

ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜೆಫ್ರಿ ವೈಟ್ ನೀಡಿರುವ ಆದೇಶದಿಂದಾಗಿ ಸಾವಿರಾರು ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ಮತ್ತು ಅಮೆರಿಕದ ಕಂಪೆನಿಗಳ ಮಾಲೀಕರು ನಿರಾಳರಾಗಿದ್ದಾರೆ.

ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಅತ್ಯುನ್ನತ ತಾಂತ್ರಿಕ ಅರ್ಹತೆಯನ್ನು ಹೊಂದಿರುವ ವಿದೇಶಿ ಉದ್ಯೋಗಿಗಳನ್ನು ನೇಮಿಸಲು ಅಮೆರಿಕದ ಕಂಪೆನಿಗಳು ಎಚ್-1ಬಿ ವೀಸಾಗಳನ್ನು ಬಳಸಬಹುದಾಗಿದೆ. ಅಮೆರಿಕವು ಪ್ರತಿ ವರ್ಷ 85,000 ವರೆಗೆ ಎಚ್-1ಬಿ ವೀಸಾಗಳನ್ನು ವಿತರಿಸುತ್ತದೆ. ಈವರೆಗಿನ ಸುಮಾರು 6 ಲಕ್ಷ ಎಚ್-1ಬಿ ವೀಸಾದಾರರ ಪೈಕಿ ಹೆಚ್ಚಿನವರು ಭಾರತ ಮತ್ತು ಚೀನಾದವರು.

 ನ್ಯಾಯಾಧೀಶ ಜೆಫ್ರಿ ವೈಟ್ ತನ್ನ 23 ಪುಟಗಳ ತೀರ್ಪಿನಲ್ಲಿ, ಎಚ್-1ಬಿ ವೀಸಾದಡಿ ನೇಮಕಗೊಳ್ಳುವ ವಿದೇಶಿ ಉದ್ಯೋಗಿಗಳಿಗೆ ಕಂಪೆನಿಗಳು ಅತ್ಯಧಿಕ ವೇತನ ನೀಡಬೇಕು ಎಂಬ ಟ್ರಂಪ್ ಸರಕಾರದ ನಿಯಮವೊಂದಕ್ಕೆ ತಡೆಯಾಜ್ಞೆ ನೀಡಿದೆ.

ಎಚ್-1ಬಿ ವೀಸಾ ಪಡೆಯಲು ಅರ್ಹತೆ ಹೊಂದುವವರ ಸಂಖ್ಯೆಯನ್ನು ಕಡಿಮೆಗೊಳಿಸುವ ಉದ್ದೇಶದ ಟ್ರಂಪ್ ಸರಕಾರದ ಇನ್ನೊಂದು ನಿಯಮವನ್ನೂ ನ್ಯಾಯಾಧೀಶರು ರದ್ದುಗೊಳಿಸಿದ್ದಾರೆ.

ಈ ಆದೇಶದ ಪರಿಣಾಮವಾಗಿ, ಡಿಸೆಂಬರ್ 7ರಂದು ಜಾರಿಗೆ ಬರಬೇಕಾಗಿದ್ದ ಆಂತರಿಕ ಭದ್ರತಾ ಇಲಾಖೆಯ ನಿಯಮಗಳು ಈಗ ಅಸಿಂಧುವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News