ಮತಾಂತರ ತಡೆ ಆಧ್ಯಾದೇಶ ಜಾರಿಯಾದ ಬೆನ್ನಿಗೇ ಅಂತರ್-ಧರ್ಮೀಯ ವಿವಾಹ ತಡೆದ ಪೊಲೀಸರು

Update: 2020-12-04 06:48 GMT

ಲಕ್ನೋ ಕಾನೂನುಬಾಹಿರ ಧಾರ್ಮಿಕ ಮತಾಂತರ ತಡೆಯಲು  ಉತ್ತರ ಪ್ರದೇಶ ಸರಕಾರವು  ಹೊಸ ಆಧ್ಯಾದೇಶ ಹೊರಡಿಸಿ ಒಂದು ವಾರವಾಗುತ್ತಲೇ  ಲಕ್ನೋದಲ್ಲಿ ಪೊಲೀಸರು ಈ  ಆಧ್ಯಾದೇಶ ಮುಂದಿಟ್ಟುಕೊಂಡು ಹಿಂದು ಮಹಿಳೆ ಹಾಗೂ ಮುಸ್ಲಿಂ ಪುರುಷನ ನಡುವಿನ ವಿವಾಹವನ್ನು ತಡೆದಿದ್ದಾರೆ.

ಲಕ್ನೋದ ಪರಾ ಎಂಬ ಪ್ರದೇಶದಲ್ಲಿ ಬುಧವಾರ ವಿವಾಹ ಸಮಾರಂಭ ನಡೆಯಬೇಕಿತ್ತು. ವಿವಾಹ ಸಂಬಂಧಿತ ಪ್ರಕ್ರಿಯೆಗಳು  ಆರಂಭಗೊಂಡು ಕೆಲವು ನಿಮಿಷಗಳಾಗುತ್ತಲೇ  ಪೊಲೀಸ್ ತಂಡವೊಂದು ಅಲ್ಲಿಗಾಗಮಿಸಿ ಎರಡೂ ಕಡೆಯವರನ್ನು ಸ್ಥಳೀಯ ಠಾಣೆಗೆ ಬರ ಹೇಳಿದೆ.

ವಿವಾಹಕ್ಕೆ ಮೊದಲು ಲಕ್ನೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಅನುಮತಿಯನ್ನು ಪಡೆಯುವಂತೆಯೂ ಎರಡೂ ಕಡೆಯವರಿಗೆ ಸೂಚಿಸಲಾಯಿತು ಹಾಗೂ ಸರಕಾರ  ಜಾರಿಗೊಳಿಸಿದ ಹೊಸ ಕಾನೂನಿನ ಪ್ರತಿಯೊಂದನ್ನೂ ಅವರಿಗೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಧೂ-ವರರ ಕುಟುಂಬಗಳು ಬಹಿರಂಗವಾಗಿ ಈ ಘಟನೆಯ ಕುರಿತು ಪ್ರತಿಕ್ರಿಯಿಸದೇ ಇದ್ದರೂ ಎರಡೂ ಕಡೆಗಳ ಪೂರ್ಣ ಸಮ್ಮತಿಯೊಂದಿಗೆ ಈ ವಿವಾಹ ಸಮಾರಂಭ ಏರ್ಪಡಿಸಲಾಗಿತ್ತೆಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಎರಡೂ ಕುಟುಂಬಗಳು ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ನಂತರ ವಿವಾಹ ನಡೆಸಲು ತೀರ್ಮಾನಿಸಿವೆ ಹಾಗೂ ಯಾವುದೇ ಮತಾಂತರದ ಉದ್ದೇಶವೂ ಇಲ್ಲವೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News