ಭಾರತದ ಶಿಕ್ಷಕ ರಂಜಿತ್ ಸಿನ್ಹಾಗೆ ಪ್ರತಿಷ್ಠಿತ ಗ್ಲೋಬಲ್ ಟೀಚರ್ಸ್ ಪ್ರಶಸ್ತಿ

Update: 2020-12-04 06:46 GMT

ಮುಂಬೈ :  ಈ ವರ್ಷದ ಗ್ಲೋಬಲ್ ಟೀಚರ್ಸ್ ಪ್ರಶಸ್ತಿ ವಿಜೇತರಾದ ರಂಜಿತ್ ಸಿನ್ಹಾ ದಿಸಾಳೆ ತಾವು ಸೇವೆ ಸಲ್ಲಿಸುತ್ತಿರುವ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿತೇವಾಡಿ ಎಂಬಲ್ಲಿರುವ ಜಿಲ್ಲಾ ಪರಿಷದ್ ಪ್ರಾಥಮಿಕ ಶಾಲೆಯಲ್ಲಿನ ಹೆಣ್ಣು ಮಕ್ಕಳ ಜೀವನದಲ್ಲಿ ಪರಿವರ್ತನೆ ತರಲು ಪಟ್ಟಿರುವ ಶ್ರಮ ಸ್ತುತ್ಯಾರ್ಹ. ಅವರ ಈ ಶ್ರಮದಿಂದಾಗಿ  ಪ್ರಮುಖವಾಗಿ ಆದಿವಾಸಿ ಸಮುದಾಯಗಳ ಬಡ ವಿದ್ಯಾರ್ಥಿನಿಯರು ಬಹಳಷ್ಟು  ಪ್ರಯೋಜನ ಪಡೆದಿದ್ದಾರೆ.

ರಂಜಿತ್ ಅವರಿಗೆ ತಾವು   10 ಲಕ್ಷ ಡಾಲರ್(7.4 ಕೋಟಿ.ರೂ.) ಮೊತ್ತದ ಪ್ರಶಸ್ತಿ ಪಡೆದಿರುವುದು ತಿಳಿಯುತ್ತಲೇ ತಮ್ಮ ಪ್ರಶಸ್ತಿಯ ಅರ್ಧದಷ್ಟು ಮೊತ್ತವನ್ನು ಒಂಬತ್ತು ಮಂದಿ ಇತರ ಫೈನಲಿಸ್ಟ್  ಗಳ ಜತೆ ಹಂಚುವುದಾಗಿ ಘೋಷಿಸಿ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಅವರ ಘೋಷಣೆಯಂತೆ ಎಲ್ಲಾ ಫೈನಲಿಸ್ಟ್ ಗಳಿಗೆ ತಲಾ 55,000 ಡಾಲರ್ ದೊರೆಯಲಿದೆ. ವರ್ಕೆ ಫೌಂಡೇಶನ್ ಸ್ಥಾಪಿಸಿದ ಈ ಪ್ರಶಸ್ತಿಯನ್ನು ಯುನೆಸ್ಕೋ ಸಹಯೋಗದೊಂದಿಗೆ ನೀಡಲಾಗುತ್ತಿದೆ.

ಲಂಡನ್ ನಗರದ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಿಂದ ನೇರ ಪ್ರಸಾರಗೊಂಡ ವರ್ಚುವಲ್ ಸಮಾರಂಭದಲ್ಲಿ ನಟ ಹಾಗೂ ಸಾಹಿತಿ ಸ್ಟೀಫನ್ ಫ್ರೈ ವಿಜೇತರ ಹೆಸರು ಘೋಷಿಸಿದರು.  ಈ ಸಂದರ್ಭ  ರಂಜಿತ್ ಅವರು ಮಹಾರಾಷ್ಟ್ರದ ತಮ್ಮ ಮನೆಯಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗಿದ್ದರಲ್ಲದೆ ತಮ್ಮ ಹೆಸರು ಘೋಷಿಸುತ್ತಲೇ ಭಾವಪರವಶರಾದರು.

ಪರಿತೇವಾಡಿ ಜಿಲ್ಲಾ ಪರಿಷದ್ ಶಾಲೆಯಲ್ಲಿ ಅವರು 2009ರಿಂದ ಶಿಕ್ಷಕರಾಗಿದ್ದಾರೆ. ಅವರು ಇಲ್ಲಿ ಸೇವೆ ಸಲ್ಲಿಸುತ್ತಿದ್ದ ಆರಂಭದಲ್ಲಿ  ದನದ ದೊಡ್ಡಿಯೊಂದರ ಸಮೀಪವಿದ್ದ  ಸಣ್ಣ ಕಟ್ಟಡದಲ್ಲಿ ಶಾಲೆ ಕಾರ್ಯಾಚರಿಸುತ್ತಿತ್ತು. ವಿದ್ಯಾರ್ಥಿಗಳ ಹಾಜರಾತಿಯೂ ಕಡಿಮೆಯಾಗಿತ್ತಲ್ಲದೆ  ಹುಡುಗಿಯರು ಸಣ್ಣ ವಯಸ್ಸಿನಲ್ಲಿಯೇ ವಿವಾಹವಾಗುತ್ತಿದ್ದುದೂ ಸಾಮಾನ್ಯವಾಗಿತ್ತು.

ಶಾಲಾ ಪಠ್ಯವೂ ವಿದ್ಯಾರ್ಥಿನಿಯರಿಗೆ ಅರ್ಥವಾಗುವಂತಹ ಕನ್ನಡ ಭಾಷೆಯಲ್ಲಿರಲಿಲ್ಲ. ಈ ಶಾಲೆಗೆ ಶಿಕ್ಷಕರಾದ ನಂತರ ರಂಜಿತ್ ಅವರು ಕನ್ನಡ ಕಲಿತು ಶಾಲಾ ಪಠ್ಯ ಪುಸ್ತಕಗಳನ್ನು ಭಾಷಾಂತರಿಸಿದ್ದರು. ಶಾಲೆಯಲ್ಲಿ ಡಿಜಿಟಲ್ ಕಲಿಕಾ ಸಾಧನಗಳನ್ನೂ ಪರಿಚಯಿಸಿದ ಅವರು ಪ್ರತಿಯೊಬ್ಬ ವಿದ್ಯಾರ್ಥಿ=ವಿದ್ಯಾರ್ಥಿನಿಗಾಗಿ ಅವರ ಅಗತ್ಯತೆಗೆ ತಕ್ಕಂತೆ ಕಲಿಸಲು ಆರಂಭಿಸಿದ್ದರು. ಅವರೇ ಆರಂಭಿಸಿದ್ದ ಕ್ಯೂಆರ್ ಕೋಡ್ ಇರುವ ಪಠ್ಯ ಪುಸ್ತಕಗ ಪದ್ಧತಿಯನ್ನೇ ಈಗ ದೇಶದಲ್ಲಿ ಅನುಸರಿಸಲಾಗುತ್ತಿದೆ.

ಈಗ ಅವರ ಶಾಲೆಯ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಶೇ 100ರಷ್ಟಾಗಿದ್ದು  ಗ್ರಾಮದ ಒಬ್ಬಳು ವಿದ್ಯಾರ್ಥಿನಿ  ವಿಶ್ವವಿದ್ಯಾಲಯದಿಂದ ಪದವಿ ಕೂಡ ಪಡೆದಿದ್ದಾಳೆ.

ರಂಜಿತ್ ಅವರು ಪರಿಸರಕ್ಕೆ ಪೂರಕವಾದ ಹಲವು ಯೋಜನೆಗಳನ್ನೂ  ಈ ಬರ ಪೀಡಿತ ಜಿಲ್ಲೆಯಲ್ಲಿ ಆರಂಭಿಸಿದ್ದಾರೆ. ಅವರ `ಲೆಟ್ಸ್ ಕ್ರಾಸ್ ದಿ ಬಾರ್ಡರ್ಸ್' ಯೋಜನೆ  ಭಾರತ ಮತ್ತು ಪಾಕಿಸ್ತಾನ, ಫೆಲೆಸ್ತೀನ್ ಮತ್ತು ಇಸ್ರೇಲ್, ಇರಾಕ್ ಮತ್ತು ಇರಾನ್ ಹಾಗೂ ಅಮೆರಿಕಾ ಮತ್ತು ಉತ್ತರ ಕೊರಿಯಾದ ಯುವ ಜನರ ನಡುವಿನ ಸಂಪರ್ಕ ಸೇತುವಾಗಿ ಜಾಗತಿಕ ಶಾಂತಿಗಾಗಿ ಶ್ರಮಿಸುತ್ತಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News