ಮಹಾರಾಷ್ಟ್ರ ವಿಧಾನಪರಿಷತ್ ಚುನಾವಣೆ: ಬಿಜೆಪಿಗೆ ಹಿನ್ನಡೆ, ಮೈತ್ರಿಕೂಟಕ್ಕೆ 4ರಲ್ಲಿ ಜಯ

Update: 2020-12-04 09:03 GMT

ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಅಧಿಕಾರವನ್ನು ಕಳೆದುಕೊಂಡಿರುವ ಬಿಜೆಪಿಯು ವಿಧಾನಪರಿಷತ್ ನ 6 ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ  ಇತ್ತೀಚೆಗೆ ನಡೆದಿರುವ ಚುನಾವಣೆಯಲ್ಲಿ ಕೇವಲ 1ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ಮೈತ್ರಿಕೂಟ ನಾಲ್ಕರಲ್ಲಿ ಜಯ ಸಾಧಿಸಿವೆ. ಉಳಿದ ಒಂದು ಸೀಟು ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.

ಶಿವಸೇನೆಯ ಮೈತ್ರಿಪಕ್ಷಗಳು ನಾಲ್ಕು ಸ್ಥಾನಗಳಲ್ಲಿ ಜಯ ಸಾಧಿಸಿದ್ದರೂ ಶಿವಸೇನೆ ಶೂನ್ಯ ಸಾಧನೆ ಮಾಡಿದೆ.. ಶಿವಸೇನೆಯ ಏಕೈಕ ಅಭ್ಯರ್ಥಿ ಅಮರಾವತಿಯಲ್ಲಿ ಪಕ್ಷೇತರ ಅಭ್ಯರ್ಥಿ ಎದುರು ಸೋತಿದ್ದಾರೆ.

ಬಿಜೆಪಿಯ ಅಮರಿಶ್ ಪಟೇಲ್ ಧುಲೆ-ನಂದೂರ್ ಬಾರ್ ಉಪ ಚುನಾವಣೆಯಲ್ಲಿ ಜಯ ಸಾಧಿಸಿದ್ದರು. ಈ ಚುನಾವಣೆಯ ಫಲಿತಾಂಶ ಈ ಮೊದಲೇ ಪ್ರಕಟವಾಗಿದೆ.

ಶರದ್ ಪವಾರ್ ನೇತೃತ್ವದ ಎನ್ ಸಿಪಿ ಔರಂಗಾಬಾದ್ ಹಾಗೂ ಪುಣೆ ಪದವೀಧರ ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.

 ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರತಿನಿಧಿಸುತ್ತಿರುವ ಪಕ್ಷದ ಭದ್ರಕೋಟೆ ನಾಗ್ಪುರದ ಪದವೀಧರ ಕ್ಷೇತ್ರದಲ್ಲಿನ ಸೋಲು ಬಿಜೆಪಿಗೆ ಭಾರೀ ನಷ್ಟ ಉಂಟು ಮಾಡಿದೆ. ಇಲ್ಲಿ 1989ರಲ್ಲಿ ಗಡ್ಕರಿ ಮೊದಲ ಬಾರಿ ಜಯ ಸಾಧಿಸಿದ್ದರು. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಗಡ್ಕರ್ 4 ಬಾರಿ ಈ ಕ್ಷೇತ್ರವನ್ನು ಗೆದ್ದಿದ್ದರು.

ಫಡ್ನವಿಸ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಪಾಟೀಲ್ ಪುಣೆಯಲ್ಲಿ ಭಾರೀ ಪ್ರಚಾರ ನಡೆಸಿದ್ದರೂ ಆಡಳಿತ ಪಕ್ಷದ ಅಭ್ಯರ್ಥಿ ಜಯ ಸಾಧಿಸಿದ್ದಾರೆ.

ಈ ಚುನಾವಣೆಯು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಹಾಗೂ ವಿಪಕ್ಷ ಬಿಜೆಪಿಯ ನಡುವಿನ ಪ್ರತಿಷ್ಠಿತ ಕಣವಾಗಿ ಪರಿಣಮಿಸಿದೆ.

ಮೈತ್ರಿಕೂಟದಲ್ಲಿ ಎನ್ ಸಿಪಿ ಹಾಗೂ ಕಾಂಗ್ರೆಸ್ ತಲಾ 2 ಸೀಟುಗಳಲ್ಲಿ ಸ್ಪರ್ಧಿಸಿದ್ದವು.  ಶಿವಸೇನೆ ಕೇವಲ ಒಂದು ಸೀಟಿನಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿದೆ. ಬಿಜೆಪಿ 4 ಸೀಟುಗಳಲ್ಲಿ ಸ್ಪರ್ಧಿಸಿದೆ. ಮತ್ತೊಂದು ಸೀಟಿನಲ್ಲಿ ಸ್ವತಂತ್ರ ಅಭ್ಯರ್ಥಿಗೆ ಬೆಂಬಲ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News