ಕೊರೋನ ಲಸಿಕೆ ಇನ್ನು ಕೆಲವೇ ವಾರಗಳಲ್ಲಿ ಸಿದ್ಧವಾಗುವ ಸಾಧ್ಯತೆ: ಪ್ರಧಾನಿ ಮೋದಿ

Update: 2020-12-04 18:19 GMT

ಹೊಸದಿಲ್ಲಿ,ಡಿ.4: ಕೋವಿಡ್-19 ವಿರುದ್ಧ ಭಾರತದ ಲಸಿಕೆ ನೀಡಿಕೆ ಕಾರ್ಯಕ್ರಮವು, ವಿಜ್ಞಾನಿಗಳ ಅನುಮೋದನೆ ದೊರೆತ ಕೂಡಲೇ ಆರಂಭವಾಗಲಿದೆ ಯೆಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಿಳಿಸಿದ್ದಾರೆ. ಕೊರೋನ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಪಾಲ್ಗೊಳ್ಳುವ ಆರೋಗ್ಯಪಾಲನಾ ಕಾರ್ಯಕರ್ತರು, ಕೋವಿಡ್-19 ವಿರುದ್ಧ ಹೋರಾಟದ ಮುಂಚೂಣಿಯ ಕಾರ್ಯಕರ್ತರು ಹಾಗೂ ಗಂಭೀರವಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ವಯೋವೃದ್ಧರಿಗೆ ಲಸಿಕೆ ವಿತರಣೆಯಲ್ಲಿ ಆದ್ಯತೆ ನೀಡಲಾಗುವುದು ಎಂದವರು ಹೇಳಿದ್ದಾರೆ.

    ದೇಶದಲ್ಲಿನ ಕೋವಿಡ್-19 ಸಾಂಕ್ರಾಮಿಕ ರೋಗ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಹೊಸದಿಲ್ಲಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಸಮಾರೋಪ ಭಾಷಣ ಮಾಡಿದ ಪ್ರಧಾನಿ, ಕೋವಿಡ್-19 ಲಸಿಕೆಗಾಗಿನ ಕಾಯುವಿಕೆಯು ಇನ್ನು ಬಹು ಕಾಲ ಇರಲಾರದು ಹಾಗೂ ಅದು ಕೆಲವೇ ವಾರದೊಳಗೆ ಸಿದ್ಧವಾಗಲಿದೆ ಎಂದು ತಜ್ಞರು ನಂಬಿದ್ದಾರೆಂದು ತಿಳಿಸಿದರು.

 ಭಾರತದಲ್ಲಿ ಸರಿಸುಮಾರು 8 ಲಸಿಕೆಗಳು ಪ್ರಾಯೋಗಿಕ ಪರೀಕ್ಷೆಯ ವಿವಿಧ ಹಂತಗಳಲ್ಲಿದ್ದು, ಅವು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯಾಗುವುದು ಖಚಿತವಾಗಿದೆ ಎಂದರು.

    ಲಸಿಕೆ ವಿತರಣೆಯ ಮೊದಲ ಹಂತ ಅಭಿಯಾನದಲ್ಲಿ ಅದನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ರಾಜ್ಯಸರಕಾರಗಳು ನೀಡುವ ಸಲಹೆಯನ್ನು ಆಧರಿಸಿ ಕೇಂದ್ರ ಸರಕಾರ ಕಾರ್ಯಾಚರಿಸಲಿದೆ ಎಂದವರು ತಿಳಿಸಿದರು.

ಕೋವಿಡ್-19 ವಿರುದ್ಧ ಲಸಿಕೆ ವಿತರಣೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ತಂಡಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯಾಚರಿಸಲಿದೆ ಎಂದು ಮೋದಿ ತಿಳಿಸಿದರು. ಲಸಿಕೆ ವಿತರಣೆ ಹಾಗೂ ಉತ್ಪಾದನೆಗೆ ಬೇಕಾದ ಪರಿಣತಿಯನ್ನು ಭಾರತ ಹೊಂದಿದೆ ಎಂದರು.

  ಕೋವಿಡ್-19 ವಿರುದ್ಧ ಲಸಿಕೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುವ ಬಗ್ಗೆ ನಮ್ಮ ವಿಜ್ಞಾನಿಗಳು ಅಪಾರ ಭರವಸೆಯನ್ನು ಹೊಂದಿ ದ್ದಾರೆಂದು ಅವರು ಹೇಳಿದರು.

‘‘ ಮಾರುಕಟ್ಟೆಯಲ್ಲಿ ವಿವಿಧ ದೇಶಗಳ ಲಸಿಕೆಗಳ ಹೆಸರುಗಳು ಕೇಳಿಬರುತ್ತಿವೆ. ಆದರೆ ಜಗತ್ತು ಮಾತ್ರ ಅತ್ಯಂತ ಕಡಿಮೆ ಬೆಲೆಯ ಹಾಗೂ ಸುರಕ್ಷಿತವಾದ ಲಸಿಕೆಗಾಗಿ ಕಾದುನಿಂತಿದೆ. ಹೀಗಾಗಿ ಇಡೀ ಜಗತ್ತು ಭಾರತದ ಬಗ್ಗೆ ಗಮನಹರಿಸುವುದು ಸಹಜವೇ ಆಗಿದೆ ’’ ಎಂದರು.

 ಕೋವಿಡ್-19 ಲಸಿಕೆಯ ಬೆಲೆಯನ್ನು ನಿಗದಿಪಡಿಸುವಾಗ ಸಾರ್ವಜನಿಕ ಆರೋಗ್ಯದ ಬಗ್ಗೆ ಆದ್ಯತೆಯನ್ನು ನೀಡಲಾಗುವುದು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News