ಭಾರತೀಯ ರೈತರ ಪ್ರತಿಭಟನೆ:ಬ್ರಿಟಿಷ್ ವಿದೇಶಿ ಕಾರ್ಯದರ್ಶಿಗೆ ಪತ್ರ ಬರೆದ ಬ್ರಿಟನ್ ನ 36 ಸಂಸದರು

Update: 2020-12-05 16:12 GMT
ತನ್ಮಂಜೀತ್ ಸಿಂಗ್

ಹೊಸದಿಲ್ಲಿ,ಡಿ.5: ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಕೆನಡಾದ ಬಳಿಕ ಈಗ ಬ್ರಿಟಿಷ್ ಸಂಸದರ ಗಮನವನ್ನು ಸೆಳೆದಿದೆ. ಪ್ರತಿಭಟನೆಯ ಕುರಿತು ಭಾರತ ಸರಕಾರದೊಂದಿಗೆ ಚರ್ಚಿಸುವಂತೆ ಲೇಬರ್ ಪಾರ್ಟಿಯ ನೇತೃತ್ವದಲ್ಲಿ ಅಲ್ಲಿಯ 36 ಸಂಸದರು ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರನ್ನು ಆಗ್ರಹಿಸಿದ್ದಾರೆ.

ಭಾರತ ಸರಕಾರವು ಹೊಸದಾಗಿ ತಂದಿರುವ ಕೃಷಿ ಕಾನೂನುಗಳು ರೈತರನ್ನು ಶೋಷಣೆಯಿಂದ ರಕ್ಷಿಸಲು ಮತ್ತು ಅವರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಗಳನ್ನು ಖಚಿತಪಡಿಸಲು ವಿಫಲಗೊಂಡಿರುವುದು ಕೊರೋನ ವೈರಸ್ ಸಾಂಕ್ರಾಮಿಕವಿದ್ದರೂ ದೇಶಾದ್ಯಂತ ರೈತರ ಪ್ರತಿಭಟನೆಗಳಿಗೆ ಕಾರಣವಾಗಿದೆ. ಇದು ಇತರ ಭಾರತೀಯ ರಾಜ್ಯಗಳ ಮೇಲೆಯೂ ತೀವ್ರ ಪರಿಣಾಮವನ್ನು ಬೀರುತ್ತದೆಯಾದರೂ ಬ್ರಿಟನ್‌ನಲ್ಲಿರುವ ಸಿಕ್ಖರು ಮತ್ತು ಪಂಜಾಬಿನೊಂದಿಗೆ ನಂಟು ಹೊಂದಿರುವವರಿಗೆ ನಿರ್ದಿಷ್ಟ ಕಳವಳದ ವಿಷಯವಾಗಿದೆ. ಹಲವಾರು ಬ್ರಿಟಷ್ ಸಿಕ್ಖರು ಮತ್ತು ಪಂಜಾಬಿಗಳು ತಮ್ಮ ಸಂಸದರ ಬಳಿ ಈ ವಿಷಯವನ್ನು ಪ್ರಸ್ತಾವಿಸಿದ್ದಾರೆ ಎಂದು ಲೇಬರ್ ಪಾರ್ಟಿಯ ಸಂಸದ ತನ್ಮನ್‌ಜಿತ್ ಸಿಂಗ್ ಧೇಸಿ ಅವರು ರಾಬ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಪಂಜಾಬಿನ ಜನಸಂಖ್ಯೆಯ ಶೇ.75ರಷ್ಟು ಕೃಷಿಯಲ್ಲಿ ತೊಡಗಿಕೊಂಡಿದೆ. ಹೀಗಾಗಿ ನೂತನ ಕೃಷಿ ಕಾನೂನುಗಳು ಪಂಜಾಬಿಗಳಿಗೆ ಬೃಹತ್ ಸಮಸ್ಯೆಯನ್ನು ತಂದೊಡ್ಡಿವೆ. ಕೆಲವರಂತೂ ಈ ಕೃಷಿ ಕಾನೂನುಗಳನ್ನು ‘ಡೆತ್ ವಾರಂಟ್’ಎಂದು ಬಣ್ಣಿಸಿದ್ದಾರೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

‘ಪಂಜಾಬ್ ಮತ್ತು ಭಾರತದಾದ್ಯಂತದ ರೈತರು ಕೃಷಿ ಕಾನೂನುಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ.

 ಅಕ್ಟೋಬರ್ ಮಾತುಕತೆಗಳ ಬಳಿಕ ಇನ್ನಷ್ಟು ಚರ್ಚೆಗಳು ನಡೆದಿದ್ದು,ರೈತರಿಗೆ ಅನ್ಯಾಯವಾಗಿದೆ ಎಂದು ಹೆಚ್ಚಿನವರು ಭಾವಿಸಿರುವ ಹಿನ್ನೆಲೆಯಲ್ಲಿ ಬ್ರಿಟಿಷ್ ಸಂಸದರು ಪಕ್ಷಭೇದವನ್ನು ಮರೆತು ವಿದೇಶಾಂಗ ಕಾರ್ಯದರ್ಶಿಗಳಿಗೆ ಪತ್ರವನ್ನು ರವಾನಿಸಿದ್ದಾರೆ ’ಎಂದು ತನ್ಮನ್‌ಜಿತ್ ಸಿಂಗ್ ಟ್ವೀಟಿಸಿದ್ದಾರೆ.

ತನ್ಮಧ್ಯೆ,‘ಭಾರತದ ರೈತರ ವಿರುದ್ಧ ಹಿಂಸಾಚಾರವು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ’ಎಂದು ಕೆನಡಾದ ಸಂಸದ ಜಾಕ್ ಹ್ಯಾರಿಸ್ ಟ್ವೀಟಿಸಿದ್ದರೆ,ಇನ್ನೋರ್ವ ಸಂಸದೆ ಆಂಡ್ರಿಯಾ ಹೋರ್ವಾಥ್ ಅವರು ‘ಸರಕಾರಿ ಹಿಂಸಾಚಾರಕ್ಕೆ ಹೆದರದೆ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸಲು ಪ್ರತಿಯೊಬ್ಬರಿಗೂ ಸಾಧ್ಯವಾಗಬೇಕು ’ಎಂದು ಟ್ವೀಟಿಸಿದ್ದಾರೆ.

ಅತ್ತ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ರೈತರ ಪ್ರತಿಭಟನೆಯನ್ನು ಬೆಂಬಲಿಸಿ ತನ್ನ ಈ ಹಿಂದಿನ ಹೇಳಿಕೆಗಾಗಿ ಭಾರತವು ಎಚ್ಚರಿಕೆ ನೀಡಿದ್ದರೂ ತನ್ನ ನಿಲುವನ್ನು ಪುನರುಚ್ಚರಿಸಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೆನಡಾದ ರಾಯಭಾರಿಯನ್ನು ಕರೆಸಿ ರಾಜತಾಂತ್ರಿಕ ಪ್ರತಿಭಟನೆಯನ್ನು ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತಿಯುತ ವಾಗಿ ಪ್ರತಿಭಟನೆಗಳನ್ನು ನಡೆಸುವ ಹಕ್ಕುಗಳನ್ನು ತಾನು ಸದಾ ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.

ಇದೇ ವೇಳೆ,ಬ್ರಿಟನ್ನಿನ ಸಿಖ್ ಮಂಡಳಿಯು ಕೆನಡಾ ಪ್ರಧಾನಿಯನ್ನು ಬೆಂಬಲಿಸುವಂತೆ ರಾಜಕೀಯ ನಾಯಕರನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News