ಜಾಗತಿಕ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಂಜಿತ್‌ಸಿಂಗ್ ರನ್ನು ಬಿಜೆಪಿ ಎಂಎಲ್‌ಸಿಗೆ ಶಿಫಾರಸು ಮಾಡಲಿದೆ: ದಾರೇಕರ್

Update: 2020-12-05 18:09 GMT
ಪ್ರವೀಣ್ ದಾರೇಕರ್ 

ಪುಣೆ, ಡಿ. 5: ಜಾಗತಿಕ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಂಜಿತ್‌ಸಿಂಗ್ ದಿಸಾಲೆ ಅವರನ್ನು ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ)ನಾಗಿ ನಾಮನಿರ್ದೇಶನ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗುವುದು ಎಂದು ಮಹಾರಾಷ್ಟ್ರದ ಬಿಜೆಪಿ ನಾಯಕ ಪ್ರವೀಣ್ ದಾರೇಕರ್ ಶನಿವಾರ ಹೇಳಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಪ್ರವೀಣ್ ದಾರೇಕರ್ ಸೋಲಾಪುರ ಜಿಲ್ಲೆಯ ಗ್ರಾಮಕ್ಕೆ ಭೇಟಿನೀಡಿ 2020ರ ಜಾಗತಿಕ ಶಿಕ್ಷಕ ಪುರಸ್ಕಾರಕ್ಕೆ ಆಯ್ಕೆಯಾಗಿ 10 ಲಕ್ಷ ಡಾಲರ್ ಪಡೆದುಕೊಂಡ ದಿಸಾಲೆ ಅವರನ್ನು ಗೌರವಿಸಿದರು. ದಿಸಾಲೆ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ದಾರೇಕರ್, ದಿಸಾಲೆ ಅವರನ್ನು ವಿಧಾನ ಪರಿಷತ್ ಸದಸ್ಯನಾಗಿ ನಾಮನಿರ್ದೇಶಿಸಲು ರಾಜ್ಯಪಾಲರಿಗೆ ಬಿಜೆಪಿ ಶಿಫಾರಸು ಮಾಡಲಿದೆ ಎಂದರು. ‘‘ನಾನು ಬಿಜೆಪಿ ವರಿಷ್ಠ ಚಂದ್ರಕಾಂತ್ ಪಾಟೀಲ್ ಹಾಗೂ ಹಿರಿಯ ನಾಯಕ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ. ಅನಂತರ ರಾಜ್ಯಪಾಲರಿಗೆ ಪತ್ರ ಬರೆಯಲಿದ್ದೇನೆ’’ ಎಂದು ಅವರು ಹೇಳಿದ್ದಾರೆ.

ರಾಜ್ಯ ವಿಧಾನ ಸಭೆಯಲ್ಲಿ ದಿಸಾಲೆ ಅವರನ್ನು ಪ್ರಶಂಶಿಸಲು ನಿರ್ಣಯ ತರುವಂತೆ ರಾಜ್ಯ ಸರಕಾರದಲ್ಲಿ ಪಕ್ಷ ಮನವಿ ಮಾಡಲಿದೆ ಎಂದು ದಾರೇಕರ್ ಹೇಳಿದರು. ಸೋಲಾಪುರದದ ಪರಿಟೆವಾಡಿಯಲ್ಲಿರುವ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 32 ವರ್ಷದ ದಿಸಾಲೆ ಜಾಗತಿಕ ಶಿಕ್ಷಕ ಪ್ರಶಸ್ತಿ 2020 ಅನ್ನು ಪಡೆದುಕೊಂಡಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಭಾರತದಲ್ಲಿ ತ್ವರಿತ ಪ್ರತಿಕ್ರಿಯೆಯ ಕೋಡೆಡ್ ಪಠ್ಯಪುಸ್ತಕದ ಕ್ರಾಂತಿಯನ್ನು ಗುರುತಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News