ಹಿರಿಯ ನಟ ರವಿ ಪಟವರ್ಧನ್ ನಿಧನ
ಮುಂಬೈ, ಡಿ. 6: ಮರಾಠಿಯ ಜನಪ್ರಿಯ ಟಿ.ವಿ. ಸರಣಿ ಕಾರ್ಯಕ್ರಮ ‘ಅಗ್ಗಾಭಾ ಸಾಸುಭಾ’ಯಿಂದ ಜನಪ್ರಿಯರಾಗಿದ್ದ ಹಾಗೂ ‘ತೇಝಾಬ್’, ‘ಅನುಕ್ಷಾ’ದಂತಹ 1980ರ ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ರವಿ ಪಟವರ್ಧನ್ (84) ಶನಿವಾರ ಹೃದಯಾಘಾತದಿಂದ ನಿಧನರಾದರು.
ರವಿ ಪಟವರ್ಧನ್ ಅವರು ನಾಲ್ಕು ದಶಕಗಳ ಕಾಲ ಮನೋರಂಜನಾ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಉಸಿರಾಟದ ತೊಂದರೆಯ ಹಿನ್ನೆಲೆಯಲ್ಲಿ ರವಿ ಪಟವರ್ಧನ ಅವರನ್ನು ಥಾಣೆಯಲ್ಲಿರುವ ಜುಪಿಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘‘ಉಸಿರಾಟದ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಸುಮಾರು 9-9.30ರ ನಡುವೆ ಅವರು ನಿಧನರಾದರು’’ ಎಂದು ರವಿ ಪಟವರ್ಧನ್ ಅವರ ಸಹೋದರ ನಿರಂಜನ ಪಟವರ್ಧನ್ ರವಿವಾರ ಹೇಳಿದ್ದಾರೆ.
ರವಿ ಪಟವರ್ಧನ್ ಅವರು ಹಲವು ನಾಟಕಗಳು ಹಾಗೂ ಹಿಂದಿಯಲ್ಲಿ ‘ಯಶ್ವಂತ್’ (1997) ಮರಾಠಿಯಲ್ಲಿ ‘ಆಶಾ ಆಸಾವ್ಯಾ ಸನ್’ (1981), ‘ಉಂಬರ್ಥಾ’ (1982), ‘ಜಂಝಾರ್’ (1987) ಹಾಗೂ ‘ಜ್ಯೋತಿಭಾ ಪುಲೆ’ ಮೊದಲಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಟಿ.ವಿಯ ಜನಪ್ರಿಯ ಸರಣಿ ಕಾರ್ಯಕ್ರಮ ‘ಅಗ್ಗಾಭಾ ಸಾಸುಭಾ’ಯಲ್ಲಿ ಅವರು ಕೊನೆಯದಾಗಿ ನಟಿಸಿದ್ದರು.