ಅಧ್ಯಕ್ಷ ಹುದ್ದೆಯನ್ನು ನನ್ನಿಂದ ಕಳವು ಮಾಡಲಾಗಿದೆ: ಟ್ರಂಪ್ ಪುನರುಚ್ಚಾರ

Update: 2020-12-06 17:17 GMT

ವ್ಯಾಲ್ಡೋಸ್ಟ (ಅಮೆರಿಕ), ಡಿ. 6: ಅಧ್ಯಕ್ಷೀಯ ಚುನಾವಣೆಯ ಬಳಿಕ, ಶನಿವಾರ ತನ್ನ ಮೊದಲ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಧ್ಯಕ್ಷ ಹುದ್ದೆಯನ್ನು ನನ್ನಿಂದ ಕಳವು ಮಾಡಲಾಗಿದೆ ಎಂಬ ಆರೋಪವನ್ನು ಪುನರುಚ್ಚರಿಸಿದ್ದಾರೆ ಹಾಗೂ ಅಂತಿಮವಾಗಿ ಗೆಲುವು ನನ್ನದೇ ಎಂದು ಹೇಳಿಕೊಂಡಿದ್ದಾರೆ.

‘‘ನಾವು ಈ ಚುನಾವಣೆಯನ್ನು ಗೆಲ್ಲುವುದರಲ್ಲಿದ್ದೇವೆ’’ ಎಂದು ಜಾರ್ಜಿಯ ರಾಜ್ಯದ ವ್ಯಾಲ್ಡೋಸ್ಟ ನಗರದಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

‘‘ಈ ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ. ಚುನಾವಣಾ ಫಲಿತಾಂಶ ಪೂರ್ವಯೋಜಿತ ಪಿತೂರಿಯಾಗಿತ್ತು’’ ಎಂದು ಅವರು ಹೇಳಿದರು.

ನವೆಂಬರ್ 3ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ನಿರ್ಗಮನ ಅಧ್ಯಕ್ಷ ಹಾಗೂ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರನ್ನು ಸೋಲಿಸಿದ್ದಾರೆ.

ಜನವರಿ 5ರಂದು ಸೆನೆಟ್‌ಗೆ ನಡೆಯಲಿರುವ ಅತ್ಯಂತ ಮಹತ್ವದ ಉಪಚುನಾವಣೆಯಲ್ಲಿ ಸ್ಪರ್ಧಿಸಲಿರುವ ರಿಪಬ್ಲಿಕನ್ ಪಕ್ಷದ ಇಬ್ಬರು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಟ್ರಂಪ್ ಜಾರ್ಜಿಯಕ್ಕೆ ಬಂದಿದ್ದರು.

ಈ ಉಪಚುನಾವಣೆಯು ಅಮೆರಿಕದ ಸೆನೆಟನ್ನು ಯಾವ ಪಕ್ಷ ನಿಯಂತ್ರಿಸುತ್ತದೆ ಎನ್ನುವುದನ್ನು ನಿರ್ಧರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News