×
Ad

ಉಗ್ರರೊಂದಿಗೆ ಸಂಪರ್ಕದ ಶಂಕೆ: ದಿಲ್ಲಿಯಲ್ಲಿ ಐವರು ಆರೋಪಿಗಳ ಬಂಧನ

Update: 2020-12-07 19:47 IST

ಹೊಸದಿಲ್ಲಿ, ಡಿ.7: ಪೂರ್ವ ದಿಲ್ಲಿಯಲ್ಲಿ ಸೋಮವಾರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 5 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ಇಬ್ಬರು ಪಂಜಾಬ್ ನಿವಾಸಿಗಳು ಹಾಗೂ ಉಳಿದವರು ಕಾಶ್ಮೀರ ಮೂಲದವರು. ಬಂಧಿತರು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಐದು ವ್ಯಕ್ತಿಗಳ ಚಲನವಲನದ ಬಗ್ಗೆ ಕಳೆದ ಮೂರು ತಿಂಗಳಿನಿಂದ ನಿಗಾ ಇಟ್ಟಿದ್ದೆವು. ಸೋಮವಾರ ಇವರು ದಿಲ್ಲಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ರವಿವಾರ ದೊರಕಿದ್ದ ಹಿನ್ನೆಲೆಯಲ್ಲಿ ಪೊಲೀಸರ ತಂಡ ಕಾರ್ಯಾಚರಣೆಗೆ ಸಿದ್ಧವಾಗಿತ್ತು. ಸೋಮವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ಆರೋಪಿಗಳು ದಿಲ್ಲಿಗೆ ಬಂದಿಳಿದಿದ್ದು ಇವರನ್ನು ಬಂಧಿಸಲು ಮುಂದಾದಾಗ ಗುಂಡು ಹಾರಿಸಿದ್ದಾರೆ. ಪೊಲೀಸರೂ 13 ಸುತ್ತು ಗುಂಡು ಹಾರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ಬಳಿಯಿಂದ ಶಸ್ತಾಸ್ತ್ರ ಮತ್ತು ಕ್ರಿಮಿನಲ್ ಕೃತ್ಯಕ್ಕೆ ಬಳಸುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ(ವಿಶೇಷ ವಿಭಾಗ) ಪ್ರಮೋದ್ ಸಿಂಗ್ ಕುಶ್ವಾಹ ಹೇಳಿದ್ದಾರೆ.

ಆರೋಪಿಗಳಲ್ಲಿ ಇಬ್ಬರು ಪಂಜಾಬ್ ಮೂಲದವರಾಗಿದ್ದು ನಿಷೇಧಿತ ಉಗ್ರ ಸಂಘಟನೆ ‘ಬಬ್ಬರ್ ಖಾಲ್ಸ ಇಂಟರ್‌ನ್ಯಾಷನಲ್’ನ ಸದಸ್ಯರೆಂದು ಶಂಕಿಸಲಾಗಿದೆ. ಕಾಶ್ಮೀರ ಮೂಲದ ಆರೋಪಿಗಳು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ಪಂಜಾಬ್ ಮೂಲದ ಆರೋಪಿಗಳು ಕುಖ್ಯಾತ ಕ್ರಿಮಿನಲ್ ಸುಖ್‌ಮೀತ್ ಸಿಂಗ್‌ನ ಸಹಚರರಾಗಿದ್ದು, ಸಿಪಿಎಂ ಮಾಜಿ ಮುಖಂಡ ಬಲವೀಂದರ್ ಸಿಂಗ್‌ರ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದಾರೆ. ಪಾಕಿಸ್ತಾನದ ಐಎಸ್‌ಐ ಪ್ರಾಯೋಜಿತ ಖಲಿಸ್ತಾನ್ ಆಂದೋಲನದ ಮುಖಂಡರ ನಿರ್ದೇಶನದಂತೆ ಇವರು ಕಾರ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News