ಸಿಬ್ಬಂದಿಗಳ ವೇತನ ಕಡಿತಗೊಳಿಸಿ ಪಿಎಂ ಕೇರ್ಸ್ ನಿಧಿಗೆ 155 ಕೋಟಿ ದೇಣಿಗೆ ನೀಡಿದ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು
ಹೊಸದಿಲ್ಲಿ, ಡಿ.7: ಸಾರ್ವಜನಿಕ ಕ್ಷೇತ್ರದ 100ಕ್ಕೂ ಹೆಚ್ಚು ಸಂಸ್ಥೆಗಳು ಸಿಬ್ಬಂದಿಗಳ ವೇತನ ಕಡಿತಗೊಳಿಸಿ ಪಿಎಂ ಕೇರ್ಸ್ ಫಂಡ್‌ಗೆ 155 ಕೋಟಿ ರೂ. ದೇಣಿಗೆ ನೀಡಿವೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಯನ್ನು ಉಲ್ಲೇಖಿಸಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ನಿಧಿಯಿಂದ ನೀಡಿರುವ 2,400 ಕೋಟಿ ರೂ. ದೇಣಿಗೆಗೆ ಹೆಚ್ಚುವರಿಯಾಗಿ 155 ಕೋಟಿ ರೂ. ಮೊತ್ತವನ್ನು ನೀಡಿವೆ. ಆದರೆ ದೇಣಿಗೆ ಪಾವತಿಸಿದವರ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಲು ಪಿಎಂ ಕೇರ್ಸ್ ಫಂಡ್ ನಿರಾಕರಿಸಿದೆ.
ಪಿಎಂ ಕೇರ್ಸ್ ಫಂಡ್‌ಗೆ 15 ಸರಕಾರಿ ಬ್ಯಾಂಕ್‌ಗಳು ಹಾಗೂ ಸಂಸ್ಥೆಗಳ ಸಿಬಂದಿಗಳ ವೇತನ ಕಡಿತಗೊಳಿಸಿ ಪಾವತಿಸಲಾಗಿದೆ. ನವೋದಯ ಶಾಲೆಗಳ ಸಹಿತ ಹಲವು ಶಿಕ್ಷಣ ಸಂಸ್ಥೆಗಳು, ಐಐಟಿಗಳು, ಕೇಂದ್ರೀಯ ವಿವಿಗಳೂ ನಿಧಿಗೆ 21.81 ಕೋಟಿ ರೂ. ದೇಣಿಗೆ ನೀಡಿದೆ. ಇದರಲ್ಲಿ ಹೆಚ್ಚಿನ ಸಂಸ್ಥೆಗಳು ಸಿಬಂದಿಗಳ ವೇತನ ಕಡಿತಗೊಳಿಸಿ ಪಾವತಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.
ಕೊರೋನ ಸೋಂಕಿನ ಹಿನ್ನೆಲೆಯಲ್ಲಿ 2020ರ ಮಾರ್ಚ್ 28ರಂದು ರಚಿಸಲಾಗಿರುವ ‘ಪ್ರೈಂ ಮಿನಿಸ್ಟರ್ಸ್ ಸಿಟಿಜನ್ ಅಸಿಸ್ಟೆನ್ಸ್ ಆ್ಯಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚುವೇಷನ್ಸ್’ (ಪಿಎಂ ಕೇರ್ಸ್) ಒಂದು ಸಾರ್ವಜನಿಕ ದತ್ತಿ ಟ್ರಸ್ಟ್ ಎಂದು ಸರಕಾರದ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಆದರೆ ಈಗಾಗಲೇ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಅಸ್ತಿತ್ವದಲ್ಲಿ ಇರುವಾಗ ಇನ್ನೊಂದು ನಿಧಿ ಸ್ಥಾಪಿಸುವ ಅಗತ್ಯವೇನಿದೆ ಎಂದು ವಿಪಕ್ಷಗಳು ಟೀಕಿಸಿವೆ.
ಪಿಎಂ ಕೇರ್ಸ್ ಫಂಡ್‌ನಲ್ಲಿರುವ ಹಣವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ವರ್ಗಾಯಿಸುವಂತೆ ಕೋರಿದ್ದ ಅರ್ಜಿಯನ್ನು ಆಗಸ್ಟ್ 18ರಂದು ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು. ಆದರೆ, ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಹೊಸದಾಗಿ ರಾಷ್ಟ್ರೀಯ ಪರಿಹಾರ ಯೋಜನೆಯನ್ನು ರೂಪಿಸುವ ಅಗತ್ಯವೇವಿತ್ತು ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿತ್ತು. ಪಿಎಂ ಕೇರ್ಸ್ ನಿಧಿಯು ಮಾಹಿತಿ ಹಕ್ಕು ವ್ಯಾಪ್ತಿಯಡಿ ಬರುವ ಸರಕಾರಿ ಪ್ರಾಧಿಕಾರವಲ್ಲ. ಆದ್ದರಿಂದ ನಿಧಿಯ ಕುರಿತ ವಿವರವನ್ನು ಒದಗಿಸಲು ಸಾಧ್ಯವಿಲ್ಲ ಎಂದು ಮೇ ತಿಂಗಳಿನಲ್ಲಿ ಕೇಂದ್ರ ಸರಕಾರ ನಿರಾಕರಿಸಿತ್ತು. ಪಿಎಂ ಕೇರ್ಸ್ ಫಂಡ್ ಸಂಸ್ಥೆಗಳ ಮತ್ತು ವೈಯಕ್ತಿಕ ದೇಣಿಗೆಗೆ ಸಂಬಂಧಿಸಿದ ಸಂಸ್ಥೆಯಾಗಿದ್ದು ಇದರ ವ್ಯವಹಾರ ಮತ್ತು ಲೆಕ್ಕಪತ್ರ ದಾಖಲೆಯನ್ನು ನಿಯಂತ್ರಕ ಮತ್ತು ಮಹಾ ಲೆಕ್ಕಪರಿಶೋಧಕ(ಸಿಎಜಿ)ರು ಪರಿಶೀಲಿಸುವಂತಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.
ಒಎನ್‌ಜಿಸಿ ಗರಿಷ್ಟ ದೇಣಿಗೆ
ಪಿಎಂ ಕೇರ್ಸ್ ಫಂಡ್‌ಗೆ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್(ಒಎನ್‌ಜಿಸಿ) ಗರಿಷ್ಟ ದೇಣಿಗೆ ಪಾವತಿಸಿದೆ. ಸಂಸ್ಥೆಯ ಸಿಬ್ಬಂದಿಗಳ ವೇತನದಿಂದ 29.06 ಕೋಟಿ ರೂ. ಕಡಿತಗೊಳಿಸಿ ಪಿಎಂ ಕೇರ್ಸ್ ಫಂಡ್‌ಗೆ ವರ್ಗಾಯಿಸಿದೆ. ತೀವ್ರ ನಷ್ಟದ ಸಮಸ್ಯೆಯಲ್ಲಿರುವ ಬಿಎಸ್‌ಎನ್ನೆಲ್ ತನ್ನ ಸಿಬಂದಿಗಳ ವೇತನ ಕಡಿತಗೊಳಿಸಿ 11.43 ಕೋಟಿ ರೂ. ದೇಣಿಗೆ ನೀಡಿದೆ. 24 ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು ಸಿಬಂದಿಗಳ ವೇತನ ಕಡಿತಗೊಳಿಸಿ 1 ಕೋಟಿ ರೂ.ಗೂ ಹೆಚ್ಚು ದೇಣಿಗೆ ನೀಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಯಿಂದ ತಿಳಿದುಬಂದಿದೆ ಎಂದು ಪತ್ರಿಕೆ ಹೇಳಿದೆ.