ಆಂಧ್ರಪ್ರದೇಶ: ನಿಗೂಢ ಕಾಯಿಲೆಯ ಕಾರಣ ಪತ್ತೆ

Update: 2020-12-08 16:50 GMT

ಅಮರಾವತಿ, ಡಿ.8: ಆಂಧ್ರಪ್ರದೇಶದ ಏಲೂರು ನಗರದಲ್ಲಿ ಒಬ್ಬ ಮೃತಪಟ್ಟು 500ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆತಂಕಕ್ಕೆ ಕಾರಣವಾಗಿದ್ದ ನಿಗೂಢ ಕಾಯಿಲೆಗೆ ಕಾರಣ ಪತ್ತೆಯಾಗಿದೆ. ಕುಡಿಯುವ ನೀರು ಮತ್ತು ಹಾಲಿನಲ್ಲಿರುವ ಸೀಸ ಹಾಗೂ ನಿಕಲ್‌ನ ಅಂಶ ಈ ಕಾಯಿಲೆಗೆ ಮೂಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಎಐಐಎಂಎಸ್ ಮತ್ತು ಆರೋಗ್ಯ ಇಲಾಖೆಯ ತಜ್ಞರ ತಂಡ ಹೇಳಿದೆ.

ಶನಿವಾರ ರಾತ್ರಿಯಿಂದ ಜನರು ಏಕಾಏಕಿ ವಾಂತಿ ಮಾಡಿಕೊಂಡು ತಲೆತಿರುಗಿ ಬಿದ್ದು ಪ್ರಜ್ಞೆ ಕಳೆದುಕೊಳ್ಳುತ್ತಿದ್ದರು. ಕೆಲ ಕ್ಷಣದವರೆಗೆ ನೆನಪು ಶಕ್ತಿಯ ನಷ್ಟ , ಆತಂಕ, ವಾಂತಿ, ತಲೆನೋವು ಮತ್ತು ಬೆನ್ನುನೋವು ಈ ರೋಗದ ಲಕ್ಷಣವಾಗಿದೆ . ಪ್ರಾಥಮಿಕ ತನಿಖೆಯಿಂದ ಈ ಕಾಯಿಲೆಗೆ ನೀರು ಮತ್ತು ಹಾಲಿನಲ್ಲಿರುವ ಸೀಸ ಹಾಗೂ ನಿಕಲ್(ತವರದಂಥಹ ಒಂದು ಲೋಹ)ನ ಅಂಶ ಕಾರಣ ಎಂದು ಕಂಡುಬಂದಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಹಾಗೂ ಇತರ ಸಂಸ್ಥೆಗಳಲ್ಲಿ ಹೆಚ್ಚಿನ ಪರೀಕ್ಷೆ ನಡೆಸಿದ್ದು ಶೀಘ್ರವೇ ವರದಿ ಕೈಸೇರಲಿದೆ ಎಂದು ತಜ್ಞರ ತಂಡ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ರೋಗಿಗಳ ದೇಹದಲ್ಲಿ ಲೋಹದ ಅಂಶ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿರುವ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ಮತ್ತು ಚಿಕಿತ್ಸೆಯ ಪ್ರಕ್ರಿಯೆಯ ಬಗ್ಗೆ ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು ಎಂದು ಮೂಲಗಳು ಹೇಳಿವೆ. ವಿಚಿತ್ರ ಕಾಯಿಲೆಯಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದು 505 ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 370ಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ . 19 ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯವಾಡ ಮತ್ತು ಗುಂಟೂರಿನ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News