ನೀತಿ ಆಯೋಗದ ಸಿಇಒ ಹೇಳಿಕೆಯ ವರದಿ ಹಿಂಪಡೆದ ಹಿಂದುಸ್ತಾನ್ ಟೈಮ್ಸ್

Update: 2020-12-08 17:01 GMT

ಹೊಸದಿಲ್ಲಿ: ‘ಅತಿಯಾದ ಪ್ರಜಾಪ್ರಭುತ್ವವು ಭಾರತದಲ್ಲಿ  ಸುಧಾರಣೆಗೆ ಅಡ್ಡಿ’ ಎಂಬ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್  ಅವರ ಹೇಳಿಕೆಯ ಕುರಿತು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿಯನ್ನು ಉಲ್ಲೇಖಿಸಿ ಪ್ರಕಟಿಸಿದ್ದ ವರದಿಯನ್ನು ಹಿಂದೂಸ್ತಾನ ಟೈಮ್ಸ್ ಇಂದು ಹಿಂಪಡೆದಿದೆ.

ಇಂದು ಮಧ್ಯಾಹ್ನ ಸುದ್ದಿಪತ್ರಿಕೆಯು ತನ್ನ ವೆಬ್ಸೈಟ್ನಲ್ಲಿ ಪಿಟಿಐ ವರದಿಯನ್ನು ಪ್ರಕಟಿಸಿತ್ತು. ‘ಅತಿಯಾದ ಪ್ರಜಾಪ್ರಭುತ್ವವು ಭಾರತದ ಸುಧಾರಣೆಗಳಿಗೆ ಅಡ್ಡಿಯಾಗುತ್ತಿದೆ’ ಎಂಬ ಶೀರ್ಷಿಕೆ ಯೊಂದಿಗೆ ಅಮಿತಾಭ್ ಕಾಂತ್ ಹೇಳಿಕೆಯನ್ನು ಪ್ರಕಟಿಸಿತ್ತು.

ಸಂಜೆ ಈ ಕುರಿತು ಟ್ವೀಟಿಸಿರುವ ಕಾಂತ್, ಖಂಡಿತವಾಗಿಯೂ ಇದು ನಾನು ಹೇಳಿದಂತೆ ಇಲ್ಲ ಎಂದಿದ್ದರು.

ನಾನು ಎಂಇಐಎಸ್ ಯೋಜನೆ ಹಾಗೂ ಸಂಪನ್ಮೂಲಗಳು ಕಡಿಮೆ ಇರುವ ಕುರಿತು ಮಾತನಾಡಿದ್ದೆ. ಉತ್ಪಾದನಾ ವಲಯದಲ್ಲಿ ಜಾಗತಿಕ ಚಾಂಪಿಯನ್ ಆಗುವ ಅಗತ್ಯವಿದೆ ಎಂದು ಹೇಳಿದ್ದೇನೆ ಎಂದಿದ್ದಾರೆ.

ಸುದ್ದಿಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಮೂಲದ ವರದಿಯನ್ನು ಹಿಂಪಡೆಯಲಾಗಿದೆ ಎಂಬ ಬ್ಯಾನರ್ ಇದೀಗ ಹಿಂದುಸ್ತಾನ್ ಟೈಮ್ಸ್ ವೆಬ್ಸೈಟ್ ಪೇಜ್ನಲ್ಲಿ ಕಂಡುಬರುತ್ತಿದೆ.

ಆದರೆ ಅಮಿತಾಭ್ ಕಾಂತ್ ಅವರು ‘ಅತಿಯಾದ ಪ್ರಜಾಪ್ರಭುತ್ವವು ಭಾರತದ ಸುಧಾರಣೆಗಳಿಗೆ ಅಡ್ಡಿಯಾಗುತ್ತದೆ’ ಎಂಬರ್ಥದ ಹೇಳಿಕೆಯನ್ನು ನೀಡಿದ್ದ  ವಿಡಿಯೋ ತುಣುಕನ್ನು ಹಲವರು ಟ್ವೀಟ್ ಮಾಡುತ್ತಿದ್ದಾರೆ. ಸ್ವರಾಜ್ಯ ಮ್ಯಾಗಝಿನ್ ಗೆ ನೀಡಿದ ಸಂದರ್ಶನದಲ್ಲಿ ಕಾಂತ್ ಅವರು ಈ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News