ಕೃಷಿ ಕಾಯ್ದೆ ಬೆಂಬಲಿಸಿ: ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಅಭಿಯಾನ
ಹೊಸದಿಲ್ಲಿ, ಡಿ.8: ಸೆಪ್ಟಂಬರ್‌ನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿರುವ 3 ಹೊಸ ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ಬಿಜೆಪಿ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನವನ್ನು ಆರಂಭಿಸಿದ್ದು , ಮೋದಿ ಆಡಳಿತದ ರಾಜಕೀಯ ವಿರೋಧಿಗಳು ಪ್ರಸಾರ ಮಾಡುತ್ತಿರುವ ಕಟ್ಟುಕತೆಗಳನ್ನು ದೇಶದ ಜನತೆಯ ಮುಂದಿಡಲಾಗುವುದು ಎಂದು ಬಿಜೆಪಿ ಹೇಳಿದೆ.
ನೂತನ ಕಾಯ್ದೆಯಿಂದ ರೈತರಿಗೆ ಆಗಲಿರುವ ಪ್ರಯೋಜನಗಳು, ಸರಕಾರಿ ಬೆಂಬಲಿತ ಮಾರುಕಟ್ಟೆ ವ್ಯವಸ್ಥೆಯಿಂದ ರೈತರ ಉತ್ಪನ್ನಗಳಿಗೆ ಸಿಗುವ ಅಧಿಕ ದರ, ಹಲವು ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಮುಂದುವರಿಸಿರುವುದು ಮುಂತಾದ ಅಂಶಗಳನ್ನು ವಿವರಿಸಿ ಬಿಜೆಪಿ ಮಂಗಳವಾರ ಹಿಂದಿಯಲ್ಲಿ ಸರಣಿ ಟ್ವೀಟ್ ಮಾಡಿದೆ.
ಕೃಷಿ ಮಸೂದೆಯ ಪ್ರಯೋಜನವನ್ನು ಮೀಮ್ಸ್‌ಗಳ ಮೂಲಕ ವಿವರಿಸಲಾಗಿದೆ. ‘ ಈ ಹಿಂದಿದ್ದ ಸರಕಾರಗಳು ರೈತರನ್ನು ದಾರಿ ತಪ್ಪಿಸುವಲ್ಲಿ ನಿರತವಾಗಿದ್ದವು ಮತ್ತು ರೈತರ ಹೆಸರಿನಲ್ಲಿ ತಮ್ಮ ಹಿತಚಿಂತನೆ ನಡೆಸಿದ್ದವು. ಆದರೆ ಮೋದಿ ಸರಕಾರ ರೈತರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಿದೆ’ ಎಂದು ಬಿಜೆಪಿ ಬಿಡುಗಡೆಗೊಳಿಸಿದ ಮೀಮ್ಸ್‌ನಲ್ಲಿ ಉಲ್ಲೇಖಿಸಲಾಗಿದೆ. ಕೈಗಾರಿಕೋದ್ಯಮಿಗಳು ರೈತರ ಭೂಮಿಯನ್ನು ವಶಕ್ಕೆ ಪಡೆಯುತ್ತಾರೆ ಎಂಬ ವದಂತಿ ಹಬ್ಬಿಸಲಾಗಿದೆ. ಆದರೆ ಹೊಸ ಕಾಯ್ದೆಯಡಿ ರೈತರಿಗೆ ಪೂರ್ಣ ರಕ್ಷಣೆ ಒದಗಿಸುವುದರಿಂದ ರೈತರ ಭೂಮಿಯನ್ನು ವಶಕ್ಕೆ ಪಡೆಯುವುದು ಅಸಾಧ್ಯ ಎಂದು ಬಿಜೆಪಿ ಟ್ವೀಟ್ ಮಾಡಿದೆ.