ನವಲಖಗೆ ಕನ್ನಡಕ ನಿರಾಕರಿಸಿದ ಪ್ರಕರಣ ಮಾನವೀಯತೆ ಅತ್ಯಂತ ಮುಖ್ಯ ಎಂದ ಹೈಕೋರ್ಟ್

Update: 2020-12-08 18:09 GMT

 ಮುಂಬೈ, ಡಿ.8: ಮುಂಬೈಯ ತಲೋಜಾ ಜೈಲಿನಲ್ಲಿರುವ ಸಾಮಾಜಿಕ ಹೋರಾಟಗಾರ ಗೌತಮ್ ನವಲಖರಿಗೆ ಪಾರ್ಸೆಲ್ ಮೂಲಕ ಕನ್ನಡಕ ಒದಗಿಸಲು ಅವಕಾಶ ನಿರಾಕರಿಸಿದ ಜೈಲು ಅಧಿಕಾರಿಗಳ ವರ್ತನೆ ಬಗ್ಗೆ ತೀವ್ರ ಅಸಮಾಧಾನ ಸೂಚಿಸಿದ ಬಾಂಬೆ ಹೈಕೋರ್ಟ್, ಮಾನವೀಯತೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದೆ. ಇಂತಹ ಸಣ್ಣಪುಟ್ಟ ವಸ್ತುಗಳನ್ನೂ ನಿರಾಕರಿಸಿದರೆ ಹೇಗೆ? ಇವೆಲ್ಲ ಮಾನವೀಯ ಪರಿಗಣನೆಯ ವಿಷಯಗಳು. ಮಾನವೀಯತೆ ಅತ್ಯಂತ ಮುಖ್ಯವಾಗಿದೆ. ಉಳಿದವೆಲ್ಲವೂ ಆಮೇಲೆ. ಇವತ್ತು ನವಲಖರ ಕನ್ನಡಕದ ವಿಷಯ ತಿಳಿಯಿತು. ಜೈಲು ಅಧಿಕಾರಿಗಳಿಗೂ ಕಾರ್ಯಾಗಾರ ನಡೆಸಲು ಇದು ಸಕಾಲವಾಗಿದೆ. ಕೈದಿಗಳ ಅವಶ್ಯಕತೆಯ ವಿಷಯದಲ್ಲಿ ಜೈಲಿನ ಸಿಬ್ಬಂದಿಗಳನ್ನು ಸಂವೇದನಾಶೀಲರನ್ನಾಗಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ ಎಸ್.‌ಎಸ್. ಶಿಂಧೆ ಮತ್ತು ಎಂಎಸ್ ಕಾರ್ಣಿಕ್‌ರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿತು.

  ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಯಾಗಿರುವ 70 ವರ್ಷದ ಗೌತಮ್ ನವಲಖರ ಕನ್ನಡಕ ಜೈಲಿನಲ್ಲಿ ನವೆಂಬರ್ 27ರಂದು ಕಳವಾಗಿತ್ತು. ತನಗೆ ಕನ್ನಡಕದ ತುರ್ತು ಅಗತ್ಯವಿದೆ ಎಂದು ನವಲಖ ಹೇಳಿದ್ದರಿಂದ ಕುಟುಂಬದವರು ಡಿಸೆಂಬರ್ 5ರಂದು ಹೊಸ ಕನ್ನಡಕವನ್ನು ಕೊರಿಯರ್ ಮೂಲಕ ಜೈಲಿಗೆ ಕಳುಹಿಸಿದ್ದರು. ಆದರೆ ಪಾರ್ಸೆಲ್ ಸ್ವೀಕರಿಸಲು ನಿರಾಕರಿಸಿದ ಜೈಲು ಅಧಿಕಾರಿಗಳು ವಾಪಸು ಕಳುಹಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದರು. ಪ್ರಕರಣದ ಬಗ್ಗೆ ಮಂಗಳವಾರ ವಿಚಾರಣೆ ನಡೆಸಿದ ಹೈಕೋರ್ಟ್, ಕೈದಿಗಳಿಗೆ ಕನ್ನಡಕದಂತಹ ಅಗತ್ಯದ ವಸ್ತುಗಳನ್ನು ಒದಗಿಸುವ ವಿಷಯದ ಬಗ್ಗೆ ಮಾನವೀಯತೆಯಿಂದ ಪರಿಗಣಿಸಬೇಕು ಎಂದು ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News