ರೈತ ನಾಯಕರೊಂದಿಗೆ ಅಮಿತ್ ಶಾ ಮಾತುಕತೆ: ಬುಧವಾರದ ನಿರ್ಣಾಯಕ ಸಭೆ ರದ್ದು

Update: 2020-12-08 18:15 GMT

ಹೊಸದಿಲ್ಲಿ,ಫೆ.8: ರೈತ ಪ್ರತಿನಿಧಿಗಳ ಜೊತೆ ಕೇಂದ್ರ ಸರಕಾರ ಬುಧವಾರ ನಡೆಯಲಿದ್ದ ಆರನೇ ಸುತ್ತಿನ ಮಾತುಕತೆಯನ್ನು ರದ್ದುಗೊಳಿಸಲಾಗಿದೆ. ರೈತರ ಬೇಡಿಕೆಗಳಿಗೆ ಸಂಬಂಧಿಸಿ ಕೇಂದ್ರ ಸರಕಾರವು ಪ್ರತಿಭಟನಾ ನಿರತ ರೈತರು ಹಾಗೂ ಕೃಷಿ ಒಕ್ಕೂಟಗಳ ಪರಿಶೀಲನೆಗಾಗಿ ಪ್ರಸ್ತಾವನೆಯೊಂದನ್ನು ಕಳುಹಿಸಲಿದೆ. ರೈತ ಪ್ರತಿನಿಧಿಗಳು ಸಭೆ ನಡೆಸಿ ಕೇಂದ್ರದ ಪ್ರಸ್ತಾವನೆಯ ಬಗ್ಗೆ ಚರ್ಚಿಸಿ ತೀರ್ಮಾನವೊಂದನ್ನು ಕೈಗೊಳ್ಳಲಿದ್ದಾರೆಂದು ಅಖಿಲ ಭಾರತ ಕಿಸಾನ್ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಹನ್ನಾನ್ ಮೊಲ್ಲಾ ತಿಳಿಸಿದ್ದಾರೆ.

ಅಮಿತ್ ಶಾ ಮಂಗಳವಾರ ವಿವಿಧ ರೈತ ಸಂಘಟನೆಗಳ ಆಯ್ದ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಇಂದು ಸಂಜೆ 8:00 ಗಂಟೆಯ ಸುಮಾರಿಗೆ ಮಾತುಕತೆ ಆರಂಭಗೊಂಡಿದ್ದು, 13 ರೈತ ಸಂಘಟನೆಗಳ ನಾಯಕರು ಭಾಗವಹಿಸಿದ್ದರು. ಮಾತುಕತೆಯಲ್ಲಿ ಪಾಲ್ಗೊಂಡ ರೈತ ನಾಯಕರಲ್ಲಿ ಪಂಜಾಬ್‌ನ 8 ಮಂದಿ ಹಾಗೂ ಇತರ ರಾಜ್ಯಗಳ ಐದು ಮಂದಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ಮಾತುಕತೆಗೆ ಮುನ್ನ ರೈತ ನಾಯಕ ರುದ್ರು ಸಿಂಗ್ ಮಾನಸಾ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಾ, ತಾವು ಶಾ ಅವರನ್ನು ಭೇಟಿಯಾದಾಗ, ತಮ್ಮ ಬೇಡಿಕೆಗಳ ಈಡೇರಿಕೆಯ ಬಗ್ಗೆ ಕೇವಲ ಸಚಿವರಿಂದ ಹೌದು ಅಥವಾ ಇಲ್ಲ ಎಂಬ ಉತ್ತರವನ್ನಷ್ಟೇ ಬಯಸುವುದಾಗಿ ಹೇಳಿದ್ದಾರೆ. ಭಾರತ ಬಂದ್‌ಗೆ ಮುನ್ನವೇ ಕೇಂದ್ರ ಸರಕಾರ ರೈತರ ಪ್ರತಿಭಟನೆಗೆ ಮಣಿದಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News