ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿತ ವ್ಯಕ್ತಿಯ ಬಿಡುಗಡೆಗೆ ಆದೇಶಿಸಿದ ಹೈಕೋರ್ಟ್
ಅಲಹಾಬಾದ್: ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿತನಾಗಿದ್ದ ವ್ಯಕ್ತಿಯೊಬ್ಬನ ಬಿಡುಗಡೆಗೆ ಆದೇಶಿಸಿರುವ ಅಲಹಾಬಾದ್ ಹೈಕೋರ್ಟ್, ಸರಕಾರಕ್ಕೆ ಅಸಾಮಾನ್ಯ ಅಧಿಕಾರ ನೀಡುವ ಈ ಕಾಯಿದೆಯನ್ನು ‘ಅತ್ಯಂತ ಎಚ್ಚರಿಕೆ’ಯಿಂದ ಅನ್ವಯಿಸಬೇಕು ಎಂದು ಹೇಳಿದೆ.
ಹೇಬಿಯಸ್ ಕಾರ್ಪಸ್ ಅರ್ಜಿಯೊಂದರ ವಿಚಾರಣೆ ನಡೆಸಿದ ಜಸ್ಟಿಸ್ ಪ್ರದೀಪ್ ಕುಮಾರ್ ಶ್ರೀವಾಸ್ತವ ಹಾಗೂ ಜಸ್ಟಿಸ್ ಪ್ರಿಂತಿನ್ಕರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಜಾವೇದ್ ಸಿದ್ದೀಖಿ ಎಂಬಾತನನ್ನು ಎನ್‍ಎಸ್‍ಎ ಕಾಯಿದೆಯಡಿ ಬಂಧಿಸಲು ನೀಡಲಾಗಿದ್ದ ಆದೇಶವನ್ನು ರದ್ದುಗೊಳಿಸಿದೆ. ಸಂಬಂಧಿತ ಪ್ರಾಧಿಕಾರಗಳು ಆತನ ಅಪೀಲಿನ ಕುರಿತಾದ ವರದಿಯನ್ನು ಸಲಹಾ ಮಂಡಳಿಯ ಮುಂದೆ ಸೂಕ್ತ ಸಮಯದಲ್ಲಿ ಪ್ರಸ್ತುತ ಪಡಿಸಿಲ್ಲ ಎಂಬ ಕಾರಣಕ್ಕೆ ಬಂಧನ ಆದೇಶ ರದ್ದುಗೊಂಡಿದೆ.
ಜೌನ್‍ಪುರದ ಭಡೇತಿ ಎಂಬ ಗ್ರಾಮದ ಸರೈಖ್ವಾಝ ಪ್ರದೇಶದಲ್ಲಿ ಈ ವರ್ಷದ ಜೂನ್ ತಿಂಗಳಲ್ಲಿ ದಲಿತರು ಹಾಗೂ ಮುಸ್ಲಿಮರ ನಡುವೆ ನಡೆದ ಸಂಘರ್ಷದ ನಂತರ ಸಿದೀಖಿಯನ್ನು ಹಿಂಸೆಯಲ್ಲಿ ತೊಡಗಿದ ಆರೋಪದ ಮೇಲೆ ಬಂಧಿಸಲಾಗಿತ್ತು. ನಂತರ ಆತನ ವಿರುದ್ಧ ಎನ್‍ಎಸ್‍ಎ ಹೇರಲಾಗಿತ್ತು.
ಜುಲೈ 10ರಂದು ಬಂಧನ ಆದೇಶ ನೀಡಲಾಗಿದ್ದರೆ ಸಿದ್ದೀಖಿ ತನ್ನ ಅಪೀಲನ್ನು ಜುಲೈ 20ರಂದೇ ನೀಡಿದ್ದ. “ಆದರೆ ಇದನ್ನು ಸಂಬಂಧಿತ ಪ್ರಾಧಿಕಾರಗಳ ಮುಂದೆ ಇರಿಸಲು ಉಂಟಾಗಿರುವ ವಿಳಂಬಕ್ಕೆ ಯಾವುದೇ ನ್ಯಾಯೋಚಿತ ವಿವರಣೆ ನೀಡಲಾಗಿಲ್ಲ ಹಾಗೂ ಈ ಮೂಲಕ ಆತನಿಗೂ ತನ್ನ ಪರ ಯಾವುದೇ ಹೇಳಿಕೆ ನೀಡುವ ಅವಕಾಶದಿಂದ ವಂಚಿತನನ್ನಾಗಿಸಲಾಗಿದೆ,'' ಎಂದು ಹೇಳಿದ ನ್ಯಾಯಾಲಯ ಆತ ಬೇರೆ ಯಾವುದೇ ಇತರ ಪ್ರಕರಣದಲ್ಲಿ ಬೇಕಾಗಿಲ್ಲದ ಹೊರತು ಆತನನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆದೇಶಿಸಿದೆ.