×
Ad

ಜಮ್ಮು ಕಾಶ್ಮೀರದಲ್ಲಿ ಸರಕಾರಿ ಬಂಗಲೆಗಳಲ್ಲಿ ‘ಅಕ್ರಮವಾಗಿ’ ವಾಸಿಸುತ್ತಿರುವವರಲ್ಲಿ ಉನ್ನತ ಬಿಜೆಪಿ ನಾಯಕರು: ವರದಿ

Update: 2020-12-09 17:18 IST

ಶ್ರೀನಗರ್:  ಜಮ್ಮು ಕಾಶ್ಮೀರದಲ್ಲಿ ಸರಕಾರಿ ಬಂಗಲೆಗಳು ಹಾಗೂ ನಿವಾಸಗಳಲ್ಲಿ ‘ಅನಧಿಕೃತವಾಗಿ’ ವಾಸಿಸುತ್ತಿರುವ  ರಾಜಕಾರಣಿಗಳ ಪೈಕಿ ಬಿಜೆಪಿಯ ಹತ್ತಕ್ಕೂ ಹೆಚ್ಚು ಮಾಜಿ ಸಚಿವರುಗಳು ಹಾಗೂ ಮಾಜಿ ಶಾಸಕರಿದ್ದಾರೆಂಬ ಮಾಹಿತಿ  ಜಮ್ಮು ಮತ್ತು ಕಾಶ್ಮೀರದ ಎಸ್ಟೇಟ್ಸ್ ಇಲಾಖೆ ಹೈಕೋರ್ಟ್ ನಲ್ಲಿ ಸಲ್ಲಿಸಿದ ಅಫಿಡವಿಟ್ ಮುಖಾಂತರ ತಿಳಿದು ಬಂದಿದೆ ಎಂದು thewire.in ವರದಿ ಮಾಡಿದೆ.

ರೋಶಿನಿ ಭೂ ಕಾನೂನಿನನ್ವಯ ಲಾಭ ಪಡೆದ ಕಾಶ್ಮೀರದ ಪ್ರಾದೇಶಿಕ ಪಕ್ಷಗಳ ನಾಯಕರುಗಳನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಮಾಹಿತಿ ಮಹತ್ವ ಪಡೆದಿದೆ ಎಂದು ‘thewire.in’ ಹೇಳಿದೆ.

ಅಕ್ಟೋಬರ್ 2ರಂದು ಎಸ್ಟೇಟ್ಸ್ ಇಲಾಖೆಯ ಪರವಾಗಿ ಉಪ ನಿರ್ದೇಶಕ ಮುಹಮ್ಮದ್ ಅಲ್ಯಾಸ್ ಖಾನ್  ಸಲ್ಲಿಸಿದ ಅಫಿಡವಿಟ್ ಪ್ರಕಾರ ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ರವೀಂದರ್ ರೈನಾ, ಮಾಜಿ ಡೆಪ್ಯುಟಿ ಸಿಎಂ ಹಾಗೂ  ಮಾಜಿ ಸ್ಪೀಕರ್ ಕವೀಂದರ್ ಗುಪ್ತಾ, ಹಿಂದಿನ ಜಮ್ಮು ಮತ್ತು ಕಾಶ್ಮೀರ ಸರಕಾರದಲ್ಲಿ ಸಚಿವರಾಗಿದ್ದ ಬಿಜೆಪಿ ನಾಯಕರಾದ ಸುನೀಲ್ ಶರ್ಮ,  ಶಕ್ತಿ ರಾಜ್ ಪರಿಹಾರ್, ಸತ್ ಶರ್ಮ, ಸುಖನಂದನ್ ಚೌಧರಿ ಹಾಗೂ  ಬಲಿ ಬಘತ್ ಅವರು ಕೂಡ ಅನಧಿಕೃತವಾಗಿ ಸರಕಾರಿ ಬಂಗಲೆಗಳಲ್ಲಿ ನೆಲೆಸಿದ್ದಾರೆಂದು ಅಫಿಡವಿಟ್ ತಿಳಿಸಿದೆ ಎಂದು thewire.in ವರದಿ ಮಾಡಿದೆ.

ಮೇಲಿನ  ನಾಯಕರ ಹೊರತಾಗಿ ಬಿಜೆಪಿಯ ಮಾಜಿ ಶಾಸಕರುಗಳಾದ ನೀಲಮ್ ಲಂಗೇಹ್, ದಲೀಪ್ ಸಿಂಗ್ ಪರಿಹಾರ್, ಆರ್ ಎಸ್ ಪಥಾನಿಯಾ, ರಾಜೇಶ್ ಗುಪ್ತಾ, ಮಾಜಿ ವಿಧಾನ ಪರಿಷತ್ ಸದಸ್ಯರಾದ  ವಿಬೋಧ್ ಗುಪ್ತಾ, ಪ್ರದೀಪ್ ಶರ್ಮ, ಅಶೋಕ್ ಖಜೂರಿಯಾ ಹಾಗೂ ವಿಕ್ರಮ್ ರಂಧ್ವಾ ಕೂಡ ಸರಕಾರಿ ಬಂಗಲೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ‘ದಿ ವೈರ್’ ವರದಿ ಅಫಿಡವಿಟ್ ಉಲ್ಲೇಖಿಸಿ ಹೇಳಿದೆ.

ಆದರೆ  ಎಸ್ಟೇಟ್ಸ್ ಉಪ ನಿರ್ದೇಶಕ ಅಲ್ಯಾಸ್ ಮುಹಮ್ಮದ್ ಖಾನ್, ಅಶೋಕ್ ಖಜೂರಿಯಾ ಮತ್ತು ಶಕ್ತಿ ಪರಿಹಾರ್ ತಮ್ಮ ಸರಕಾರಿ ನಿವಾಸಿಗಳನ್ನು ತೆರವುಗೊಳಿಸಿದ್ದಾರೆ.

“ಯಾರೂ ಸರಕಾರಿ ನಿವಾಸಗಳಲ್ಲಿ ಅಕ್ರಮವಾಗಿ ವಾಸಿಸುತ್ತಿಲ್ಲ, ಎಲ್ಲರೂ ಬಾಡಿಗೆ  ನೀಡುತ್ತಿದ್ದಾರೆ. ನಾವು ಭದ್ರತಾ ಕಾರಣಗಳಿಗಾಗಿ ಸರಕಾರಿ ನಿವಾಸದಲ್ಲಿದ್ದೇವೆ. ಮುಂದಿನ ವಿಧಾನಸಭೆ ರಚನೆಯಾಗುವ ತನಕ ಸರಕಾರಿ ನಿವಾಸಗಳಲ್ಲಿರುವುದಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ನನಗೆ ಅನಿಸುತ್ತದೆ, ಸರಕಾರದಿಂದ ನಿವಾಸ ತೆರವುಗೊಳಿಸುವಂತೆ ನೋಟಿಸ್ ಕೂಡ ಬಂದಿಲ್ಲ,'' ಎಂದು ಬಿಜೆಪಿಯ ಕವೀಂದರ್ ಗುಪ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News