ಕೇಂದ್ರ ಸರಕಾರದ ಹೊಸ ಪ್ರಸ್ತಾವ ನಿರಾಕರಿಸಿದ ರೈತರು; ಬೃಹತ್ ಪ್ರತಿಭಟನೆಗೆ ಸಿದ್ಧತೆ
ಹೊಸದಿಲ್ಲಿ, ಡಿ.9: ನೂತನ ಕೃಷಿ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ಮಾಡುವ ಕೇಂದ್ರ ಸರಕಾರದ ಕೊಡುಗೆಯನ್ನು ಪ್ರತಿಭಟನಾ ನಿರತ ರೈತರು ಬುಧವಾರ ತಿರಸ್ಕರಿಸಿದ್ದು, ತಮ್ಮ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಸರಣಿ ಯೋಜನೆಗಳನ್ನು ಘೋಷಿಸಿದ್ದಾರೆ. ದಿಲ್ಲಿ-ಜೈಪುರ ಹೆದ್ದಾರಿ ಬಂದ್, ರಿಲಯನ್ಸ್ ಮಾಲ್‌ಗಳಿಗೆ ಬಹಿಷ್ಕಾರ ಹಾಗೂ ಟೋಲ್ ಪ್ಲಾಝಾಗಳಿಗೆ ಮುತ್ತಿಗೆಯಂತಹ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದ್ದಾರೆ. ಡಿಸೆಂಬರ್ 14ರ ಒಳಗೆ ದೇಶಾದ್ಯಂತ ಪೂರ್ಣ ಪ್ರಮಾಣದ ಪ್ರತಿಭಟನೆಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ.
ದಿಲ್ಲಿಯ ಸಿಂಘು ಗಡಿಯಲ್ಲಿ ಬುಧವಾರ ರೈತ ಸಂಘಟನೆಗಳು ಬುಧವಾರ ಮತ್ತೆ ಸಭೆಯನ್ನು ನಡೆಸಿದ್ದು, ನೂತನ ಕೃಷಿ ಕಾಯ್ದೆಯನ್ನು ರದ್ದುಪಡಿಸುವುದನ್ನು ಹೊರತುಪಡಿಸಿ ಇನ್ನಾವುದೇ ರಾಜಿಸೂತ್ರವನ್ನು ತಾವು ಒಪ್ಪಿಕೊಳ್ಳುವುದಿಲ್ಲವೆಂದು ಘೋಷಿಸಿವೆ.
ಬುಧವಾರ ಸಂಜೆ ನಡೆದ ರೈತ ಒಕ್ಕೂಟಗಳ ಪ್ರತಿನಿಧಿಗಳ ಸಭೆಯ ಬಳಿಕ ರೈತ ಮುಖಂಡ ದರ್ಶನ್‌ಪಾಲ್ ಸುದ್ದಿಗಾರರ ಜೊತೆ ಮಾತನಾಡಿ, “ಡಿಸೆಂಬರ್ 12ರ ಒಳಗೆ ದಿಲ್ಲಿ-ಜೈಪುರ ಹೆದ್ದಾರಿಯನ್ನು ನಾವು ಮುಚ್ಚುಗಡೆಗೊಳಿಸುತ್ತೇವೆ. ದೇಶದ್ಯಾಂತ ಎಲ್ಲಾ ಟೋಲ್ ಪ್ಲಾಝಾಗಳಲ್ಲಿಯೂ ನಾವು ಧರಣಿ ನಡೆಸಲಿದ್ದೇವೆ. ಡಿಸೆಂಬರ್ 14ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ನಾವು ಕರೆ ನೀಡಿದ್ದೇವೆ. ಬಿಜೆಪಿಯ ಪ್ರತಿಯೊಬ್ಬ ಸಂಸದ, ಶಾಸಕನ ವಿರುದ್ಧ ಪ್ರತಿಭಟನೆ ನಡೆಸಬೇಕೆಂದು ಜನರಿಗೆ ಕರೆ ನೀಡುತ್ತೇವೆ’’ ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ವಿವಿಧ ರೈತ ಒಕ್ಕೂಟಗಳ 13 ಮಂದಿ ನಾಯಕರು ಭಾಗವಹಿಸಿದ್ದರು. ಕೃಷಿ ಕಾಯ್ದೆಯಲ್ಲಿ ಮಾಡಲುದ್ದೇಶಿಸಿರುವ ತಿದ್ದುಪಡಿಗಳ ಪ್ರಸ್ತಾವನೆಯನ್ನು ರೈತ ಮುಖಂಡರಿಗೆ ಸಲ್ಲಿಸುವುದಾಗಿ ಕೇಂದ್ರ ಸರಕಾರವು ಸಭೆಯಲ್ಲಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನೇತೃತ್ವದಲ್ಲಿ ಇಂದು ರೈತ ಪ್ರತಿನಿಧಿಗಳೊಂದಿಗೆ ನಡೆಯಲಿದ್ದ ಸಭೆಯನ್ನು ಮುಂದೂಡಲಾಗಿತ್ತು.
ಈ ಮಧ್ಯೆ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿಕೆಯೊಂದನ್ನು ನೀಡಿ, ರೈತರ ಜೊತೆಗಿನ ಸಂಧಾನ ಮಾತುಕತೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
14ನೇ ದಿನಕ್ಕೆ ಕಾಲಿಟ್ಟ ರೈತ ಮುಷ್ಕರ
ಈ ಮಧ್ಯೆ ರೈತರ ಪ್ರತಿಭಟನೆ ಬುಧವಾರ 14ನೇ ದಿನಕ್ಕೆ ಕಾಲಿರಿಸಿದ್ದು, ದಿಲ್ಲಿಯ ಸಿಂಘು ಗಡಿಯಲ್ಲಿ ಸಾವಿರಾರು ಮಂದಿ ಮುಷ್ಕರವನ್ನು ಮುಂದುವರಿಸಿದ್ದಾರೆ. ಹರ್ಯಾಣ-ದಿಲ್ಲಿ ಗಡಿ ಪ್ರದೇಶಗಳಾದ ಟಿಕ್ರಿ, ಜರೂಡಾ ಹಾಗೂ ಧನ್ಸಾಗಳಲ್ಲಿಯೂ ಪ್ರತಿಭಟನೆ ಮುಂದುವರಿದಿದ್ದು, ಅಲ್ಲಿನ ರಸ್ತೆಗಳನ್ನು ಸಂಚಾರಕ್ಕೆ ಮುಚ್ಚುಗಡೆಗೊಳಿಸಲಾಗಿದೆ. ರಾಜಧಾನಿಯ ಗಡಿ ಪ್ರದೇಶಗಳಲ್ಲಿ ಮಾತ್ರವಲ್ಲದೆ ರೈತರ ಪ್ರತಿಭಟನೆಗೆ ಅವಕಾಶ ನೀಡಲಾಗಿದ್ದ ದಿಲ್ಲಿಯ ಹೊರವಲಯದ ಮೈದಾನದಲ್ಲಿಯೂ ಸಾವಿರಾರು ರೈತರು ಧರಣಿ ಮುಂದುವರಿಸಿದ್ದಾರೆ.