ಲಂಚಗುಳಿತನದಲ್ಲಿ ಭಾರತ ಏಶ್ಯಾದಲ್ಲೇ ನಂ.1: ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಷನಲ್

Update: 2020-12-09 17:08 GMT

ಹೊಸದಿಲ್ಲಿ, ಡಿ. 9: ಲಂಚಗುಳಿತನದಲ್ಲಿ ಭಾರತ ಏಶ್ಯಾದಲ್ಲಿ ಅತ್ಯಧಿಕ ದರ ಹೊಂದಿದೆ ಎಂದು ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಷನಲ್ ಪ್ರಕಟಿಸಿದ ವರದಿ ‘ಜಾಗತಿಕ ಭ್ರಷ್ಟಾಚಾರದ ಮಾನದಂಡ’ ಹೇಳಿದೆ. ಭ್ರಷ್ಟಾಚಾರ ವಿರೋಧಿ ದಿನವಾದ ಡಿಸೆಂಬರ್ 9ರಂದು ಟ್ರಾನ್ಸ್‌ಫರೆನ್ಸಿ ಇಂಡಿಯಾ ಈ ವರದಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಲಂಚ ನೀಡುತ್ತಿರುವವರಲ್ಲಿ ಸುಮಾರು ಶೇ. 50 ಮಂದಿಯಲ್ಲಿ ನೀವು ಯಾಕೆ ಲಂಚ ನೀಡುತ್ತೀರಿ ಎಂದು ಪ್ರಶ್ನಿಸಲಾಗಿತ್ತು. ಅದಕ್ಕೆ ಶೇ. 32 ಮಂದಿ ನಾವು ವೈಯಕ್ತಿಕ ಸಂಪರ್ಕದ ಮೂಲಕ ಲಂಚ ನೀಡಿದ್ದೇವೆ. ಲಂಚ ನೀಡದೆ ಆರೋಗ್ಯ ಸೇವೆ ಹಾಗೂ ಶಿಕ್ಷಣದಂತಹ ಸೇವೆಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.

ಈ ವರದಿ ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ನೀಡುವ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಅತಿ ದೊಡ್ಡ ಹೊಡೆತವಾಗಿದೆ. ಹೆಚ್ಚಿನ ದೇಶಗಳಲ್ಲಿ ಭ್ರಷ್ಟಾಚಾರ ಉನ್ನತ ಮಟ್ಟದಲ್ಲಿ ಮಾತ್ರ ಇರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಅದಕ್ಕಿಂತ ಭಿನ್ನವಾಗಿ ಭಾರತದಲ್ಲಿ ಈ ಪಿಡುಗು ಕೆಳ ಮಟ್ಟದ ಆಡಳಿತದಲ್ಲೂ ಕಂಡು ಬರುತ್ತಿದೆ. ದೊಡ್ಡ ಮಟ್ಟದ ಭ್ರಷ್ಟಾಚಾರ ಎಲ್ಲರ ಗಮನ ಸೆಳೆದರೂ ಪ್ರತಿದಿನದ ಸಣ್ಣಪುಟ್ಟ ಭ್ರಷ್ಟಾಚಾರ ಸಾಮಾನ್ಯ ಜನರನ್ನು ಪೀಡಿಸುತ್ತಿರುತ್ತದೆ. ವಿಕೇಂದ್ರೀಕೃತ ಭ್ರಷ್ಟಾಚಾರವನ್ನು ಯಾವುದೇ ಕೇಂದ್ರೀಕೃತ ವ್ಯವಸ್ಥೆಯಿಂದ ನಿಗ್ರಹಿಸಲು ಸಾಧ್ಯವಿಲ್ಲ. ಸ್ಥಳೀಯವಾಗಿ ಭ್ರಷ್ಟಾಚಾರವನ್ನು ಬಹಿರಂಗಪಡಿಸಲು ಹಾಗೂ ವರದಿ ಮಾಡಲು ಸಾಮಾನ್ಯ ಜನರನ್ನು ಸಬಲೀಕರಿಸುವುದು ಹಾಗೂ ಭ್ರಷ್ಟಾಚಾರಿ ಅಧಿಕಾರಿಗಳು ಉತ್ತರದಾಯಿಯಾಗಲು ದೂರಿನ ಮೇಲೆ ತತ್‌ಕ್ಷಣವೇ ಕಾರ್ಯನಿರ್ವಹಿಸುವ ವ್ಯವಸ್ಥೆ ಈಗ ನಮಗೆ ಅಗತ್ಯ ಇದೆ. ಭ್ರಷ್ಟಾಚಾರವನ್ನು ಬಹಿರಂಗಪಡಿಸಲು ಸಾಮಾನ್ಯ ಜನರಿಗೆ ಕಳೆದ 15 ವರ್ಷಗಳಿಂದ ಲಭ್ಯವಿರುವ ಏಕೈಕ ಹಾಗೂ ಹೆಚ್ಚು ಪರಿಣಾಮಕಾರಿ ಸಾಧನ ಮಾಹಿತಿ ಹಕ್ಕು ಕಾಯ್ದೆ. ತಮ್ಮ ಮೂಲಭೂತ ಹಕ್ಕುಗಳು ಹಾಗೂ ಪಡಿತರ, ಪಿಂಚಣಿ, ಆರೋಗ್ಯ ಸೇವೆಯಂತಹ ಸೌಲಭ್ಯಗಳನ್ನು ಪಡೆಯಲು ಈ ಕಾಯ್ದೆಯನ್ನು ಕಡು ಬಡವರು ಹಾಗೂ ಅಂಚಿಗೆ ತಳ್ಳಲ್ಪಟ್ಟವರು ಸೇರಿದಂತೆ ದೇಶದ 3 ಕೋಟಿಗೂ ಅಧಿಕ ಜನರು ಬಳಸಿದ್ದಾರೆ. ಅಲ್ಲದೆ ಈ ಕಾಯ್ದೆಯ ಅದ್ಭುತ ಸಾಮರ್ಥ್ಯವನ್ನು ಅರಿತುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News