ಖಾಲಿಸ್ತಾನ್ ಪರ ಚಟುವಟಿಕೆ ಆರೋಪ: ವಿದೇಶದಲ್ಲಿ ನೆಲೆಸಿರುವ 16 ಜನರ ವಿರುದ್ಧ ಎಫ್‌ಐಆರ್
ಹೊಸದಿಲ್ಲಿ, ಡಿ.9: ದೇಶದ್ರೋಹ ಕೃತ್ಯದಲ್ಲಿ ತೊಡಗಿರುವ ಮತ್ತು ದೇಶದಲ್ಲಿ ಧರ್ಮದ ಆಧಾರದಲ್ಲಿ ದ್ವೇಷವನ್ನು ಉತ್ತೇಜಿಸಿರುವ ಆರೋಪದಲ್ಲಿ ಅಮೆರಿಕ, ಕೆನಡ ಮತ್ತು ಬ್ರಿಟನ್‌ನಲ್ಲಿ ನೆಲೆಸಿರುವ 16 ಜನರ ವಿರುದ್ಧ ರಾಷ್ಟ್ರೀಯ ತನಿಖಾ ಸಮಿತಿ (ಎನ್‌ಐಎ) ಬುಧವಾರ ಆರೋಪಪಟ್ಟಿ ದಾಖಲಿಸಿದೆ.
ಅಮೆರಿಕದ 7, ಇಂಗ್ಲೆಂಡ್ ನ 6 ಮತ್ತು ಕೆನಡಾದ 3 ಆರೋಪಿಗಳು ಖಾಲಿಸ್ತಾನ್ ಸ್ಥಾಪನೆಯ ಉದ್ದೇಶದ ‘ಜನಾಭಿಮತ 2020’ ಎಂಬ ಹೆಸರಿನಡಿ ಅಭಿಯಾನ ಆರಂಭಿಸಿದ್ದು ದೇಶ ವಿಭಜನೆಯ ಷಡ್ಯಂತ್ರ ರಚಿಸಿದ್ದಾರೆ ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಐಪಿಸಿ ಮತ್ತು ಅಕ್ರಮ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ)ಯ ವಿವಿಧ ಸೆಕ್ಷನ್‌ಗಳಡಿ ಆರೋಪಪಟ್ಟಿ ದಾಖಲಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ ಭಯೋತ್ಪಾದನೆ ವಿರೋಧಿ ಕಾಯ್ದೆಯಡಿ ಭಯೋತ್ಪಾದಕರು ಎಂದು ಹೆಸರಿಸಿದ ಗುರ್‌ಪತ್ವಂತ್ ಸಿಂಗ್ ಪನೂನ್, ಹರ್ದೀಪ್ ಸಿಂಗ್ ನಿಜ್ಜರ್ ಮತ್ತು ಪರಮಜಿತ್ ಸಿಂಗ್ ಆರೋಪಿಗಳಲ್ಲಿ ಸೇರಿದ್ದಾರೆ.
ಈ ಮೂವರು ಈಗ ಕ್ರಮವಾಗಿ ಅಮೆರಿಕ, ಕೆನಡ ಮತ್ತು ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ಅವತಾರ್ ಸಿಂಗ್ ಪನೂನ್, ಹರ್ಪೀತ್ ಸಿಂಗ್, ಅಮರ್‌ದೀಪ್ ಸಿಂಗ್ ಪುರೆವಾಲ್, ಹರ್ಜಾಪ್ ಸಿಂಗ್, ಸಬರ್ಜಿತ್ ಸಿಂಗ್ ಮತ್ತು ಎಸ್ ಹಿಮ್ಮತ್ ಸಿಂಗ್(ಅಮೆರಿಕದಲ್ಲಿ ನೆಲೆಸಿದ್ದಾರೆ), ಗುರುಪ್ರೀತ್ ಸಿಂಗ್ ಬಾಗಿ, ಸರಬ್‌ಜಿತ್ ಸಿಂಗ್ ಬನ್ನೂರ್, ಕುಲವಂತ್ ಸಿಂಗ್ ಮೊಥಾಡ, ದೂಪಿಂದರ್‌ಜಿತ್ ಸಿಂಗ್ ಮತ್ತು ಕುಲವಂತ್ ಸಿಂಗ್ (ಅಮೆರಿಕ), ಜೆಎಸ್ ಧಲಿವಾಲ್ ಮತ್ತು ಜತೀಂದರ್ ಸಿಂಗ್ ಗ್ರೆವಾಲ್(ಕೆನಡ) ಹೆಸರು ಎಫ್‌ಐಆರ್‌ನಲ್ಲಿದೆ. ಇವರು ನಿಷೇಧಿತ ಸಿಖ್ ಫಾರ್ ಜಸ್ಟಿಸ್(ಎಸ್‌ಎಫ್‌ಜೆ) ಸಂಘಟನೆಯ ಸದಸ್ಯರು ಎಂದು ಎನ್‌ಐಎ ತಿಳಿಸಿದೆ. ಪಾಕ್ ಸೇರಿದಂತೆ ವಿದೇಶಿ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಲಿಸ್ತಾನ್ ಉಗ್ರರ ಸಂಘಟನೆಯ ಮುಂಚೂಣಿ ಸಂಸ್ಥೆಯಾಗಿ ಎಸ್‌ಎಫ್‌ಜೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.