ಆರೋಗ್ಯ, ಔಷಧ ಕ್ಷೇತ್ರದಲ್ಲಿ ಸಹಕಾರ: ಭಾರತ- ಸುರಿನಾಮ್ ಒಪ್ಪಂದಕ್ಕೆ ಸಂಪುಟ ಅನುಮೋದನೆ
Update: 2020-12-09 23:07 IST
ಹೊಸದಿಲ್ಲಿ, ಡಿ.9: ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿ ಪರಸ್ಪರ ಸಹಕಾರದ ಕುರಿತು ಭಾರತ ಮತ್ತು ಸುರಿನಾಮ್ ದೇಶಗಳ ನಡುವಿನ ಮೆಮೊರಾಂಡಮ್ ಆಫ್ ಅಂಡರ್‌ಸ್ಟಾಂಡಿಂಗ್‌ಗೆ (ಔಪಚಾರಿಕವಾಗಿ ದಾಖಲೆಯಲ್ಲಿ ವಿವರಿಸಿರುವ ಒಪ್ಪಂದ) ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಆರೋಗ್ಯ ಕ್ಷೇತ್ರದಲ್ಲಿ ಉಭಯ ದೇಶಗಳ ಆರೋಗ್ಯ ಇಲಾಖೆಗಳ ಜಂಟಿ ಉಪಕ್ರಮ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸಹಕಾರಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದ ಒಪ್ಪಂದ ಇದಾಗಿದೆ.
ವೈದ್ಯರ, ತಂತ್ರಜ್ಞರ, ಇತರ ಆರೋಗ್ಯ ಸಿಬ್ಬಂದಿಗಳ ಮತ್ತು ಅಧಿಕಾರಿಗಳ ತರಬೇತಿ ಮತ್ತು ವಿನಿಮಯ, ಮಾನವ ಸಂಪನ್ಮೂಲ ಅಭಿವೃದ್ಧಿಗೆ ಮತ್ತು ಆರೋಗ್ಯಸೇವೆಯ ಸೌಲಭ್ಯದ ಆಧುನೀಕರಣಕ್ಕೆ ನೆರವು, ಔಷಧಗಳ ನಿಯಂತ್ರಣ, ಮಾಹಿತಿ ವಿನಿಮಯ, ಔಷಧ ಕ್ಷೇತ್ರದಲ್ಲಿ ವ್ಯಾಪಾರ ಅಭಿವೃದ್ಧಿ ಅವಕಾಶ ಹೆಚ್ಚಿಸುವುದು ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಸರಕಾರ ಹೇಳಿಕೆ ತಿಳಿಸಿದೆ.