×
Ad

22,810 ಕೋಟಿ ರೂ. ಮೊತ್ತದ ಎಬಿಆರ್‌ವೈ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ

Update: 2020-12-09 23:22 IST

ಹೊಸದಿಲ್ಲಿ, ಡಿ.9: ಸಂಸ್ಥೆಗಳು ಹೊಸದಾಗಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಪ್ರೋತ್ಸಾಹ ನೀಡುವ ಉದ್ದೇಶದ ಆತ್ಮನಿರ್ಭರ ಭಾರತ್ ರೋಝ್‌ಗಾರ್(ಉದ್ಯೋಗ) ಯೋಜನೆಗೆ 22,810 ಕೋಟಿ ರೂ. ಒದಗಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಸರಕಾರದ ಹೇಳಿಕೆ ತಿಳಿಸಿದೆ.

ಕೋವಿಡ್ ಚೇತರಿಕೆಯ ಹಂತದಲ್ಲಿ ಆತ್ಮನಿರ್ಭರ ಭಾರತ್ ಪ್ಯಾಕೇಜ್ 3.0ರಡಿ, ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಹೆಚ್ಚಿಸಲು ಹಾಗೂ ಹೊಸ ಉದ್ಯೋಗಾವಕಾಶ ಸೃಷ್ಟಿಯನ್ನು ಪ್ರೋತ್ಸಾಹಿಸುವ ಆತ್ಮನಿರ್ಭರ ಭಾರತ್ ರೋಝ್‌ಗಾರ್ ಯೋಜನೆಗೆ 22,810 ಕೋಟಿ ರೂ. ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಇದರಲ್ಲಿ ಈ ಆರ್ಥಿಕ ವರ್ಷಕ್ಕೆ 1,584 ಕೋಟಿ ರೂ. ನಿಗದಿಗೊಳಿಸಲಾಗಿದೆ. ಈ ಯೋಜನೆಯಡಿ, 2020ರ ಅಕ್ಟೋಬರ್ 1ರಿಂದ 2021ರ ಜೂನ್ 30ರವರೆಗಿನ ಅವಧಿಯಲ್ಲಿ ಹೊಸದಾಗಿ ಉದ್ಯೋಗಕ್ಕೆ ಸೇರ್ಪಡೆಯಾಗುವ ನೌಕರರಿಗೆ ಪಾವತಿಸುವ ಇಪಿಎಫ್(ನೌಕರರ ಭವಿಷ್ಯ ನಿಧಿ) ಮೊತ್ತವನ್ನು ಕೇಂದ್ರ ಸರಕಾರವೇ ಭರಿಸಲಿದೆ ಎಂದು ಕೇಂದ್ರ ಕಾನೂನು ಸಚಿವ ಸಂತೋಷ್ ಗಂಗಾವರ್ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದ್ದಾರೆ. 1000ದವರೆಗೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಹೊಸದಾಗಿ ನೇಮಿಸಿಕೊಳ್ಳುವ ನೌಕರರ ಮೂಲ ವೇತನದಿಂದ ಇಪಿಎಫ್‌ಗೆ ಕಡಿತವಾಗುವ 12 ಶೇ. ಮೊತ್ತ ಹಾಗೂ ಉದ್ಯೋಗದಾತರು ಪಾವತಿಸಬೇಕಿರುವ 12 ಶೇ. ಮೊತ್ತವನ್ನು (ಒಟ್ಟು 24 ಶೇ.) 2 ವರ್ಷದ ಅವಧಿಗೆ ಕೇಂದ್ರ ಸರಕಾರವೇ ಪಾವತಿಸಲಿದೆ.

1000ಕ್ಕಿಂತ ಹೆಚ್ಚಿನ ನೌಕರರನ್ನು ಹೊಂದಿರುವ ಸಂಸ್ಥೆಗಳು ಹೊಸದಾಗಿ ನೇಮಿಸಿಕೊಳ್ಳುವ ಸಿಬ್ಬಂದಿಗಳ 12 ಶೇ. ಮೊತ್ತವನ್ನು 2 ವರ್ಷದವರೆಗೆ ಕೇಂದ್ರ ಸರಕಾರ ಭರಿಸಲಿದೆ. ತಿಂಗಳಿಗೆ 15,000 ರೂ.ಗಿಂತ ಕಡಿಮೆ ವೇತನ ಪಡೆಯುವವರು, ಇಪಿಎಫ್ ಸಂಸ್ಥೆಯಲ್ಲಿ ನೋಂದಾಯಿತಗೊಂಡಿರುವ ಸಂಸ್ಥೆಯಲ್ಲಿ 2020ರ ಅಕ್ಟೋಬರ್ 1ರ ಮೊದಲು ಕೆಲಸ ಮಾಡುತ್ತಿದ್ದ ನೌಕರರು ಅಥವಾ ಈ ಅವಧಿಯಲ್ಲಿ ಇಪಿಎಫ್ ಸದಸ್ಯ ಖಾತೆ ಸಂಖ್ಯೆಯನ್ನು ಹೊಂದಿರದ ನೌಕರರು ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. 15,000 ರೂ.ಗಿಂತ ಕಡಿಮೆ ಸಂಬಳ ಹೊಂದಿದ್ದು, 2020ರ ಮಾರ್ಚ್ 1ರಿಂದ 2020ರ ಸೆಪ್ಟಂಬರ್ 30ರ ಅವಧಿಯಲ್ಲಿ ಕೊರೋನ ಸೋಂಕಿನಿಂದಾಗಿ ಕೆಲಸ ಬಿಟ್ಟವರು ಮತ್ತು 2020ರ ಸೆಪ್ಟಂಬರ್ 30ರವರೆಗೆ ಇಪಿಎಫ್‌ಒ ಯೋಜನೆಯ ವ್ಯಾಪ್ತಿಗೆ ಬರುವ ಸಂಸ್ಥೆಗೆ ಸೇರ್ಪಡೆಯಾಗದವರೂ ಈ ಸೌಲಭ್ಯ ಪಡೆಯಲು ಅರ್ಹರು. ಈ ಯೋಜನೆಯಿಂದ ಲಕ್ಷಾಂತರ ಕೆಲಸಗಾರರಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News