ರಾಷ್ಟ್ರಪತಿ ಅವರನ್ನು ಭೇಟಿಯಾದ ಪ್ರತಿಪಕ್ಷ ನಿಯೋಗ: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮನವಿ

Update: 2020-12-09 18:26 GMT

ಹೊಸದಿಲ್ಲಿ, ಡಿ. 9: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್‌ಸಿಪಿ ನಾಯಕ ಶರದ್ ಪವಾರ್ ಹಾಗೂ ಎಡರಂಗದ ನಾಯಕರನ್ನು ಒಳಗೊಂಡ ಪ್ರತಿಪಕ್ಷಗಳ ನಿಯೋಗ ಬುಧವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿದೆ ಹಾಗೂ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿದೆ.

 ರಾಹುಲ್ ಗಾಂಧಿ ಹಾಗೂ ಶರದ್ ಪವಾರ್ ಅಲ್ಲದೆ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹಾಗೂ ಡಿಎಂಕೆ ನಾಯಕ ಟಿ.ಕೆ.ಎಸ್. ಇಳಂಗೋವನ್ ಅವರನ್ನೂ ಒಳಗೊಂಡ ಪ್ರತಿಪಕ್ಷಗಳ ನಾಯಕರ ಐವರ ನಿಯೋಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿತು. ‘‘ನಾವು ರಾಷ್ಟ್ರಪತಿ ಅವರನ್ನು ಭೇಟಿಯಾಗಿದ್ದೇವೆ ಹಾಗೂ ಮೂರು ಕೃಷಿ ಕಾಯ್ದೆಗಳ ಬಗ್ಗೆ ನಮ್ಮ ನಿಲುವನ್ನು ತಿಳಿಸಿದ್ದೇವೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮನವಿ ಮಾಡಿದ್ದೇವೆ. ಈ ಕಾಯ್ದೆಗಳನ್ನು ಹಿಂಪಡೆಯದೇ ಇದ್ದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ರಾಷ್ಟ್ರಪತಿ ಅವರಿಗೆ ತಿಳಿಸಿದ್ದೇವೆ’’ ಎಂದು ರಾಷ್ಟ್ರಪತಿ ಅವರನ್ನು ಭೇಟಿಯಾದ ಬಳಿಕ ರಾಹುಲ್ ಗಾಂಧಿ ಹೇಳಿದರು.

ಕೃಷಿ ಕ್ಷೇತ್ರವನ್ನು ಪ್ರಧಾನಿ ಅವರ ಗೆಳೆಯರಿಗೆ ಹಸ್ತಾಂತರಿಸುವ ಉದ್ದೇಶವನ್ನು ಈ ನೂತನ ಕಾಯ್ದೆ ಹೊಂದಿರುವಂತೆ ಕಾಣುತ್ತಿದೆ. ಆದರೆ, ರೈತರು ಭಯ ಪಡಲಾರರು. ಅವರು ಪ್ರತಿಭಟನೆಯಿಂದ ಹಿಂದೆ ಸರಿಯಲಾರರು. ಅವರು ಶಾಂತಿಯುತ ಪ್ರತಿಭಟನೆಯನ್ನು ಮುಂದುವರಿಸಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು. ಪಾಲುದಾರ ಪಕ್ಷಗಳೊಂದಿಗೆ ಅಥವಾ ಸಂಸತ್ತಿನ ಆಯ್ಕೆ ಸಮಿತಿಯೊಂದಿಗೆ ಚರ್ಚೆ ನಡೆಸದೇ ಇರುವುದರಿಂದ ಈ ಕೃಷಿ ಕಾಯ್ದೆಗಳನ್ನು ಹಿಂದೆ ತೆಗೆಯಬೇಕು ಎಂದು ವಿವಿಧ ರಾಜಕೀಯ ಪಕ್ಷಗಳು ರಾಷ್ಟ್ರಪತಿ ಅವರಲ್ಲಿ ಮನವಿ ಮಾಡಿವೆ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿದರು. ಈ ಮೂರು ಕೃಷಿ ಕಾಯ್ದೆಗಳನ್ನು ಸಂಸತ್ತಿನಲ್ಲಿ ಪ್ರಜಾಪ್ರಭುತ್ವ ವಿರೋಧಿಯಾಗಿ ಅಂಗೀಕರಿಸಲಾಗಿದೆ. ಈ ಕಾಯ್ದೆಗಳನ್ನು ಹಿಂಪಡೆಯುವಂತೆ ನಾವು ಕೋರಿದ್ದೇವೆ ಎಂದು ಸಿಪಿಎಂನ ಸೀತಾರಾಮ ಯೆಚೂರಿ ಹೇಳಿದರು. ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಿಯೋಗವನ್ನು ಐದು ಸದಸ್ಯರಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News