ಕ್ಸಿನ್‌ಜಿಯಾಂಗ್: ಮುಸ್ಲಿಮರ ಸ್ವೇಚ್ಛಾಚಾರದ ಬಂಧನಕ್ಕಾಗಿ ಬೃಹತ್ ಮಾಹಿತಿ ಕೋಶ:ಎಚ್‌ಆರ್‌ಡಬ್ಲ್ಯು

Update: 2020-12-09 18:37 GMT

ವಾಶಿಂಗ್ಟನ್, ಡಿ. 9: ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿರುವ ಮುಸ್ಲಿಮರ ಸ್ವೇಚ್ಛಾಚಾರದ ಬಂಧನಕ್ಕಾಗಿ ಆ ದೇಶವು ಬೃಹತ್ ಮಾಹಿತಿಕೋಶವೊಂದನ್ನು ಸಿದ್ಧಪಡಿಸುತ್ತಿದೆ ಹಾಗೂ ಮುಖ ಪರದೆ ಧರಿಸುವುದು, ಕುರ್‌ಆನ್ ಅಧ್ಯಯನ ಮಾಡುವುದು ಹಾಗೂ ಹಜ್ ಯಾತ್ರೆಗೆ ಹೋಗುವುದನ್ನು ಬಂಧನಕ್ಕೆ ಕಾರಣಗಳಾಗಿ ಬಳಸಲಾಗುತ್ತಿದೆ ಎಂದು ಅಮೆರಿಕದ ಮಾನವಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್ (ಎಚ್‌ಆರ್‌ಡಬ್ಲ್ಯು)’ ಹೇಳಿದೆ.

ಕ್ಸಿನ್‌ಜಿಯಾಂಗ್ ವಲಯದ ಅಕ್ಸು ಪ್ರದೇಶದಲ್ಲಿ ಬಂಧನದಲ್ಲಿರುವ 2,000ಕ್ಕೂ ಅಧಿಕ ಮಂದಿಯ ಸೋರಿಕೆಯಾಗಿರುವ ಪಟ್ಟಿಯೊಂದು ತನಗೆ ಲಭಿಸಿದೆ ಎಂದು ಎಚ್‌ಆರ್‌ಡಬ್ಲ್ಯು ಹೇಳಿದೆ. ಚೀನಾ ಸರಕಾರವು ಸಿದ್ಧಪಡಿಸಿರುವ ಇಂಟಗ್ರೇಟಡ್ ಜಾಯಿಂಟ್ ಆಪರೇಶನ್ಸ್ ಪ್ಲಾಟ್‌ಫಾರ್ಮ್ (ಐಜೆಒಪಿ) ಎಂಬ ಕಾರ್ಯಕ್ರಮವು ಜನರು ಹೊಂದಿರುವ ಸಂಬಂಧಗಳಿಗಾಗಿ, ಅವರ ಸಂವಹನಗಳಿಗಾಗಿ, ಅವರ ಪ್ರಯಾಣ ಇತಿಹಾಸಗಳಿಗಾಗಿ ಹಾಗೂ ಅಧಿಕಾರಿಗಳು ಶಂಕಿತರು ಎಂದು ಭಾವಿಸಿರುವ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿರುವುದಕ್ಕಾಗಿ ಜನರನ್ನು ಬಂಧಿಸಬಹುದು ಎಂದು ಹೇಳುತ್ತದೆ.

‘‘ಚೀನಾವು ತಂತ್ರಜ್ಞಾನವನ್ನು ಬಳಸಿಕೊಂಡು ಕ್ಸಿನ್‌ಜಿಯಾಂಗ್‌ನ ಟರ್ಕಿಕ್ ಮುಸ್ಲಿಮರನ್ನು ಹೇಗೆ ದಮನಿಸುತ್ತಿದೆ ಎನ್ನುವುದಕ್ಕೆ ಅಕ್ಸು ಬಂಧಿತರ ಪಟ್ಟಿ ಉತ್ತಮ ಉದಾಹರಣೆಯಾಗಿದೆ’’ ಎಂದು ಎಚ್‌ಆರ್‌ ಡಬ್ಲ್ಯು ನಲ್ಲಿ ಹಿರಿಯ ಚೀನಾ ಸಂಶೋಧಕಿಯಾಗಿರುವ ಮಾಯಾ ವಾಂಗ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News