×
Ad

ರಾಜಧಾನಿಯಲ್ಲಿ ಒಂದೆಡೆ ರೈತ ಪ್ರತಿಭಟನೆ ಕಾವು; ಇನ್ನೊಂದೆಡೆ ಮೈಕೊರೆಯುವ ಚಳಿ

Update: 2020-12-10 09:38 IST

ಹೊಸದಿಲ್ಲಿ, ಡಿ.10: ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆಯ ಕಾವು ಹೆಚ್ಚುತ್ತಿರುವ ನಡುವೆಯೇ ಮೈಕೊರೆಯುವ ಚಳಿ ದಾಖಲಾಗಿದೆ.

ಈ ವರ್ಷ ಇದೇ ಮೊದಲ ಬಾರಿಗೆ ದಿಲ್ಲಿಯ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗಿಳಿದಿದೆ. ಗುರುವಾರ ಮುಂಜಾನೆ ಕನಿಷ್ಠ ಉಷ್ಣಾಂಶ 9.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಇದು ವಾಡಿಕೆಗಿಂತ ಕಡಿಮೆ. ಈ ಬಾರಿ ಚಳಿಗಾಲ ಮುಂಚಿತವಾಗಿಯೇ ಆರಂಭವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜಧಾನಿಯ ಗರಿಷ್ಠ ಉಷ್ಣಾಂಶ 25.6 ಡಿಗ್ರಿ ಸೆಲ್ಸಿಯಸ್‌ ಇದ್ದು, ಇದು ವಾಡಿಕೆ ಉಷ್ಣಾಂಶಕ್ಕಿಂತ 2 ಡಿಗ್ರಿಯಷ್ಟು ಕಡಿಮೆ. ಹಿಮಚ್ಛಾದಿತ ಪಶ್ಚಿಮ ಹಿಮಾಲಯ ಪ್ರದೇಶದಿಂದ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿಯ ಕನಿಷ್ಠ ಉಷ್ಣಾಂಶ 10 ಡಿಗ್ರಿಗಿಂತ ಕೆಳಗೆ ಬರಲಿದೆ ಎಂದು ಹವಾಮಾನ ಇಲಾಖೆ ಸೋಮವಾರ ಮುನ್ಸೂಚನೆ ನೀಡಿತ್ತು.
ಪಂಜಾಬ್‌ನ ಆದಂಪುರದಲ್ಲಿ 5.6 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು, ಇದು ಈ ವರ್ಷದ ಕನಿಷ್ಠ ತಾಪಮಾನವಾಗಿದೆ. ಹಿಸ್ಸಾರ್, ನರ್ನುವಲ್, ರೋಹ್ಟಕ್, ಸಿರ್ಸಾದಲ್ಲಿ ಕ್ರಮವಾಗಿ 8.2, 8, 9 ಮತ್ತು 8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.
"ಸಾಮಾನ್ಯವಾಗಿ ನವೆಂಬರ್‌ನಲ್ಲಿ ತಾಪಮಾನ 10 ಡಿಗ್ರಿಗಿಂತ ಕಡಿಮೆಯಾಗುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ 2017ರ ನವೆಂಬರ್ ಕೊನೆಯ ವಾರ 7.6 ಡಿಗ್ರಿ ದಾಖಲಾಗಿತ್ತು. ಈ ಅವಧಿಯಲ್ಲಿ ಒಂದಂಕಿಗೆ ಉಷ್ಣಾಂಶ ಇಳಿಯುತ್ತಿರುವುದು ವಿಶೇಷ. ಈ ವರ್ಷ ಚಳಿಗಾಲ ಬೇಗ ಆರಂಭವಾದಂತಿದೆ" ಎಂದು ಪ್ರಾದೇಶಿಕ ಹವಾಮಾನ ಮುನ್ಸೂಚನಾ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ.

2018ರಲ್ಲಿ ನವೆಂಬರ್‌ನಲ್ಲಿ ಕನಿಷ್ಠ ಅಂದರೆ 10.5 ಡಿಗ್ರಿ ಹಾಗೂ 2019ರಲ್ಲಿ 11.4 ಡಿಗ್ರಿ ಸೆಲ್ಸಿಯಸ್‌ದಾಖಲಾಗಿತ್ತು.
ರವಿವಾರದ ವೇಳೆಗೆ ಕನಿಷ್ಠ ತಾಪಮಾನ ಮತ್ತಷ್ಟು ಕುಸಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News