ಐಸಿಸಿ ಟ್ವೆಂಟಿ-20 ರ‍್ಯಾಂಕಿಂಗ್: ಲೋಕೇಶ್ ರಾಹುಲ್ ಗೆ 3ನೇ ಸ್ಥಾನ

Update: 2020-12-10 05:05 GMT

ದುಬೈ, ಡಿ.9: ಭಾರತ ಮತ್ತು ಆಸ್ಟ್ರೇಲಿಯ ನಡುವಿನ 3 ಪಂದ್ಯಗಳ ಟ್ವೆಂಟಿ-20 ಸರಣಿಯ ಮುಕ್ತಾಯದ ನಂತರ ಪ್ರಕಟಗೊಂಡಿರುವ ಬ್ಯಾಟ್ಸ್ ಮನ್‌ಗಳ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್ ಕ್ರಮವಾಗಿ 8 ಮತ್ತು 3ನೇ ಸ್ಥಾನವನ್ನು ಗಳಿಸಿದ್ದಾರೆ.

  ಟ್ವೆಂಟಿ-20 ಸರಣಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ ನಲ್ಲಿದ್ದರು. ಭಾರತ ಈ ಸರಣಿಯನ್ನು 2-1 ಅಂತರದಿಂದ ಜಯಿಸಿತ್ತು. ವಿರಾಟ್ ಕೊಹ್ಲಿ 44.66 ಸರಾಸರಿಯಲ್ಲಿ 134 ರನ್ ಗಳಿಸಿದ್ದರು. ಮಂಗಳವಾರ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ 32ರ ಹರೆಯದ ಕೊಹ್ಲಿ 85 ರನ್ ಗಳಿಸಿದ್ದಾರೆ. ಅಲ್ಲದೆ ಲೋಕೇಶ್ ರಾಹುಲ್ ಮೂರು ಪಂದ್ಯಗಳಲ್ಲಿ 81 ರನ್ ಗಳಿಸಿ 816 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಗಾಯಗೊಂಡಿರುವ ಆರಂಭಿಕ ಆಟಗಾರ ರೋಹಿತ್ ಶರ್ಮಾ 14 ನೇ ಸ್ಥಾನವನ್ನು ಪಡೆದಿದ್ದಾರೆ. ಶಿಖರ್ ಧವನ್ ರ್ಯಾಂಕಿಂಗ್‌ನಲ್ಲಿ 19ನೇ ಸ್ಥಾನಕ್ಕೆ ತಲುಪಿದ್ದಾರೆ. ಶ್ರೇಯಾಂಕದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಡೇವಿಡ್ ಮಲನ್ (1) ಮತ್ತು ಪಾಕಿಸ್ತಾನ ನಾಯಕ ಬಾಬರ್ ಆಝಮ್ (2) ಮೊದಲ ಹಾಗೂ ಎರಡನೇ ಸ್ಥಾನದಲ್ಲಿ ಪ್ರಾಬಲ್ಯ ಮುಂದುವರಿಸಿದ್ದಾರೆ. ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ 21ರ ಹರೆಯದ ಆಫ್‌ಸ್ಪಿನ್ನರ್ ವಾಶಿಂಗ್ಟನ್ ಸುಂದರ್ ಭಾರತದ ಅತ್ಯುನ್ನತ ಶ್ರೇಯಾಂಕಿತ ಆಟಗಾರ ಆಗಿದ್ದಾರೆ. ಸುಂದರ್ ಭಾರತದ ಪರ ಎಲ್ಲಾ 3 ಪಂದ್ಯಗಳಲ್ಲಿ ಕಾಣಿಸಿಕೊಂಡರು. 2 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಮುಂಬರುವ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಜಸ್‌ಪ್ರೀತ್ ಬುಮ್ರಾ ಅವರಿಗೆ ಎಲ್ಲಾ 3 ಟ್ವೆಂಟಿ-20 ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಇದು ಅವರ ಶ್ರೇಯಾಂಕದ ಮೇಲೆ ಪರಿಣಾಮ ಬೀರಿದೆ. ಅವರು 17ನೇ ಸ್ಥಾನಕ್ಕೆ ಇಳಿದಿದ್ದಾರೆ. ಆಸ್ಟ್ರೇಲಿಯ ಸ್ಪಿನ್ನರ್ ಆ್ಯಡಮ್ ಝಾಂಪ ಮತ್ತು ಇಂಗ್ಲೆಂಡ್ ವೇಗಿ ಕ್ರಿಸ್ ಜೋರ್ಡಾನ್ ಇಬ್ಬರು ದೊಡ್ಡ ಲಾಭ ಗಳಿಸಿದ್ದಾರೆ. ಝಾಂಪ ಮೊದಲ 5 ಸ್ಥಾನಗಳಲ್ಲಿ 2 ಸ್ಥಾನಗಳನ್ನು ಗಳಿಸಿದರೆ, ಜೋರ್ಡಾನ್ ಈಗ 10ನೇ ಸ್ಥಾನವನ್ನು ಪಡೆದಿದ್ದಾರೆ. ಮೊದಲ ಮತ್ತು 2ನೇಯ ಸ್ಥಾನವನ್ನು ಕ್ರಮವಾಗಿ ಅಫ್ಘಾನಿಸ್ತಾನ ಸ್ಪಿನ್ ಜೋಡಿ ರಶೀದ್ ಖಾನ್ ಮತ್ತು ಮುಜೀಬ್ ಉರ್ ರಹ್ಮಾನ್ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News