ಗೋಹತ್ಯೆ, ‘ಲವ್ ಜಿಹಾದ್’ ಕಾಯ್ದೆಗಳ ಅಸಲಿ ಉದ್ದೇಶ

Update: 2020-12-11 19:30 GMT

‘ಲವ್ ಜಿಹಾದ್’ ಎನ್ನುವುದು ಕೇವಲ ಸಂಘಪರಿವಾರದ ಕಲ್ಪನಾ ವಿಲಾಸವಾಗಿದೆ. ಅಂತಹದೊಂದು ವಿದ್ಯಮಾನ ಅಸ್ತಿತ್ವದಲ್ಲೇ ಇಲ್ಲವೆಂದು ಹಲವಾರು ನ್ಯಾಯಾಲಯಗಳು ಸ್ಪಷ್ಟವಾಗಿ ಹೇಳಿವೆ. ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿರುವ ‘ಲವ್ ಜಿಹಾದ್’ ಕಾಯ್ದೆಗಳನ್ನು ನ್ಯಾಯಾಲಯಗಳು ರದ್ದುಗೊಳಿಸಲಿರುವುದು ಗ್ಯಾರಂಟಿ.


ಕರ್ನಾಟಕದ ಬಿಜೆಪಿ ಸರಕಾರ ತನ್ನ ನೂತನ ಗೋಹತ್ಯೆ ನಿಷೇಧ ಮಸೂದೆಗೆ ವಿಧಾನಸಭೆಯ ಅನುಮೋದನೆ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಿಧಾನ ಮಂಡಲದಲ್ಲಿ ಒಪ್ಪಿಗೆ ಸಿಗದಿದ್ದರೇನಂತೆ, ಸುಗ್ರೀವಾಜ್ಞೆಯ ಮಾರ್ಗ ಇದ್ದೇ ಇದೆಯಲ್ಲ. ಸದ್ಯದಲ್ಲೇ ‘ಲವ್ ಜಿಹಾದ್’ ವಿರುದ್ಧವೂ ಕಾಯ್ದೆಯೊಂದನ್ನು ತರಲಿದ್ದೇವೆಂದು ರಾಜ್ಯ ಸರಕಾರದ ಪ್ರಮುಖ ಪದಾಧಿಕಾರಿಗಳು ಹೇಳಿದ್ದಾರೆ. ಗೋಹತ್ಯೆ ಮತ್ತು ‘ಲವ್ ಜಿಹಾದ್’ ವಿರುದ್ಧದ ಇಂತಹುದೇ ಕಾಯ್ದೆಗಳು ಇನ್ನಿತರ ಬಿಜೆಪಿ ಆಡಳಿತದ ರಾಜ್ಯಗಳಲ್ಲಿಯೂ ಜಾರಿಯಾಗಿವೆ ಅಥವಾ ಜಾರಿಯಾಗುತ್ತಲಿವೆ. ಇಷ್ಟೊಂದು ಅವಸರದಲ್ಲಿ ಕಾಯ್ದೆಗಳನ್ನು ಮಾಡಹೊರಟಿರುವುದರ ಹಿಂದೆ ಒಂದು ಸ್ಪಷ್ಟ ಉದ್ದೇಶವಿರುವ ಹಾಗೆ ಕಾಣುತ್ತದೆ. ಅದರ ಸುಳಿವನ್ನು ಆರೆಸ್ಸೆಸ್‌ನ ಓರ್ವ ಪ್ರಮುಖ ಪದಾಧಿಕಾರಿಯಾದ ರಾಜೇಶ್ವರ್ ಸಿಂಗ್ ಅವರು 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಾಕ್ಷಣ ನೀಡಿದ್ದಾರೆ. ‘2021ರೊಳಗಾಗಿ ಭಾರತವನ್ನು ಹಿಂದೂ ರಾಷ್ಟ್ರವಾಗಿಸುವುದೇ ನಮ್ಮ ಗುರಿ. ಮುಸ್ಲಿಮರು ಮತ್ತು ಕ್ರೈಸ್ತರಿಗೆ ಇಲ್ಲಿ ವಾಸಮಾಡುವ ಯಾವುದೇ ಹಕ್ಕು ಇಲ್ಲ.....ಹೀಗಾಗಿ ಅವರನ್ನು ಒಂದೋ ಹಿಂದೂ ಧರ್ಮಕ್ಕೆ ಮತಾಂತರಿಸಲಾಗುವುದು ಅಥವಾ ಇಲ್ಲಿಂದ ಓಡಿಹೋಗುವಂತೆ ನಿರ್ಬಂಧಿಸಲಾಗುವುದು’ (Mail Today, 19 December 2014) 

 ಎಂದಾತ ಘೋಷಿಸಿದ್ದರು. ಗೋಹತ್ಯೆ ಕುರಿತಂತೆ ಕೆಲವೊಂದು ಚಾರಿತ್ರಿಕ ಸತ್ಯಗಳನ್ನು ಜನರ ಮುಂದಿಡುವ ಅವಶ್ಯಕತೆ ಇಂದು ಹಿಂದೆಂದಿಗಿಂತಲೂ ಹೆಚ್ಚಿರುವ ಕಾರಣ ಪ್ರಸಕ್ತ ಲೇಖನದಲ್ಲಿ ಕೇವಲ ಗೋಹತ್ಯೆ ವಿಚಾರವನ್ನು ಕೈಗೆತ್ತಿಕೊಳ್ಳಲಾಗಿದೆ. ‘ಲವ್ ಜಿಹಾದ್’ ಎನ್ನುವುದು ಕೇವಲ ಸಂಘಪರಿವಾರದ ಕಲ್ಪನಾ ವಿಲಾಸವಾಗಿದೆ. ಅಂತಹದೊಂದು ವಿದ್ಯಮಾನ ಅಸ್ತಿತ್ವದಲ್ಲೇ ಇಲ್ಲವೆಂದು ಹಲವಾರು ನ್ಯಾಯಾಲಯಗಳು ಸ್ಪಷ್ಟವಾಗಿ ಹೇಳಿವೆ. ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿರುವ ‘ಲವ್ ಜಿಹಾದ್’ ಕಾಯ್ದೆಗಳನ್ನು ನ್ಯಾಯಾಲಯಗಳು ರದ್ದುಗೊಳಿಸಲಿರುವುದು ಗ್ಯಾರಂಟಿ.

ಗೋಹತ್ಯೆ ನಿಷೇಧ ಕೂಗಿನ ಹಿಂದಿರುವುದು ಅಪ್ಪಟ ರಾಜಕೀಯ
1960ರ ದಶಕದಲ್ಲಿ ಆರೆಸ್ಸೆಸ್‌ನ ಸರಸಂಘಚಾಲಕನಾಗಿದ್ದ ‘ಗುರು’ ಗೋಳ್ವಲ್ಕರ್ ಅವರು ಅಂದು ರಾಷ್ಟ್ರವ್ಯಾಪಿ ಚಳವಳಿಯೊಂದನ್ನು ನಡೆಸಿ ಕೆಲವೊಂದು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೊಳಿಸುವಲ್ಲಿ ಸಫಲರಾಗಿದ್ದರು. ಆ ಸಂದರ್ಭದಲ್ಲಿ ಕೇಂದ್ರ ಸರಕಾರ ಒಂದು ತ್ರಿಸದಸ್ಯ ಸಮಿತಿಯನ್ನು ನೇಮಿಸಿ ಈ ವಿಷಯದ ಬಗ್ಗೆ ಕೂಲಂಕಷ ಅಧ್ಯಯನ ನಡೆಸುವಂತೆ ಆದೇಶಿಸಿತ್ತು. ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಎ.ಕೆ.ಸರ್ಕಾರ್ ಅಧ್ಯಕ್ಷತೆಯ ಆ ಸಮಿತಿಯ ಸದಸ್ಯರಾಗಿದ್ದವರು ಗೋಳ್ವಲ್ಕರ್, ಪುರಿಯ ಶಂಕರಾಚಾರ್ಯ ಮತ್ತು ಅಮುಲ್ ಖ್ಯಾತಿಯ ಡಾ. ವರ್ಗೀಸ್ ಕುರಿಯನ್. ಒಮ್ಮೆ ಸಮಿತಿಯ ಮುಂದೆ ಹಾಜರಾಗುವಂತೆ ಹೈದರಾಬಾದಿನ ಕೋಶೀಯ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರದ (Centre for Cellular and Molecular Biology) ಸ್ಥಾಪಕ ನಿರ್ದೇಶಕರಾದ ಪುಷ್ಪ ಎಂ. ಭಾರ್ಗವರಿಗೆ ಕರೆ ಬಂದಿತು. ರಾಷ್ಟ್ರೀಯ ಜ್ಞಾನ ಆಯೋಗದ ಮಾಜಿ ಅಧ್ಯಕ್ಷರೂ ಆಗಿದ್ದ ಭಾರ್ಗವರಿಗೆ ‘ಗುರೂಜಿ’ ಕೆಲವೊಂದು ಪ್ರಶ್ನೆಗಳನ್ನು ಹಾಕಿದರು.

ಗೋಳ್ವಲ್ಕರ್: ಶರೀರ ಹಾಲು ಮತ್ತು ಮಾಂಸಗಳನ್ನು ಹೇಗೆ ತಯಾರಿಸುತ್ತದೆ?
ಭಾರ್ಗವ: ಅವೆರಡೂ ಮೂಲತಃ ಒಂದೇ ರೀತಿಯಾದ ಪ್ರಕ್ರಿಯೆಗಳ ಮೂಲಕ ತಯಾರಿಸಲ್ಪಡುತ್ತವೆ.
ಗೋಳ್ವಲ್ಕರ್: ಹಾಗಾದರೆ ನೀವೇಕೆ ಮಾಂಸ ಮಾತ್ರ ತಿನ್ನುತ್ತೀರಿ? ಹಾಲೇಕೆ ಕುಡಿಯುವುದಿಲ್ಲ?
ಭಾರ್ಗವ: ನಿಮ್ಮದೇ ತರ್ಕ ಬಳಸಿ ನಾನು ನಿಮಗೊಂದು ಪ್ರಶ್ನೆ ಕೇಳುತ್ತೇನೆ. ನೀವ್ಯಾಕೆ ಹಾಲು ಕುಡಿಯುತ್ತೀರಿ? ಯಾಕೆ ಮಾಂಸ ಸೇವಿಸುವುದಿಲ್ಲ?
ಸಿಟ್ಟಿನಿಂದ ಕುದ್ದುಹೋದ ಗೋಳ್ವಲ್ಕರ್‌ರನ್ನು ಸಮಾಧಾನಪಡಿಸುವಷ್ಟರಲ್ಲಿ ಸಮಿತಿಯ ಅಧ್ಯಕ್ಷರು ಮತ್ತು ಶಂಕರಾಚಾರ್ಯರಿಗೆ ಸಾಕುಬೇಕಾಯಿತು! ಸಭೆ ಮುಕ್ತಾಯವಾದ ನಂತರ ಕುರಿಯನ್ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಇದೇ ಗೋಳ್ವಲ್ಕರ್‌ರು ಗೋಹತ್ಯೆ ನಿಷೇಧದ ಬೇಡಿಕೆಯ ಹಿಂದಿರುವುದು ಶುದ್ಧ ರಾಜಕೀಯ ಎಂದು ಒಪ್ಪಿಕೊಂಡರು! (ಚಂದನ್ ಚಕ್ರಬರ್ತಿ, ದ ವೈರ್, 2.8.2017)

ಇದೇ ಗೋ ರಾಜಕೀಯದ ಭಾಗವಾಗಿ ಗೋಳ್ವಲ್ಕರ್‌ರು ಕೊಟ್ಟಂಥ ‘ಈ ದೇಶದಲ್ಲಿ ಗೋಹತ್ಯೆ ಪ್ರಾರಂಭವಾದುದು ವಿದೇಶಿ ಆಕ್ರಮಣಕಾರರ (ಅರ್ಥಾತ್ ಮುಸ್ಲಿಮರ) ಆಗಮನದೊಂದಿಗೆ’ (Spotlight, ಬೆಂಗಳೂರು, ಸಾಹಿತ್ಯ ಸಿಂಧು ಪ್ರಕಾಶನ) ಎಂಬ ಹೇಳಿಕೆ ಒಂದು ಹಸಿ ಹಸಿ ಸುಳ್ಳು ಎಂಬುದನ್ನು ಸ್ವಾಮಿ ವಿವೇಕಾನಂದರೇ ಸಾಬೀತುಪಡಿಸಿದ್ದಾರೆ. ಸ್ವಾಮಿ ವಿವೇಕಾನಂದರನ್ನು ಕಬ್ಜಾ ಮಾಡಿಕೊಂಡಿರುವ ಸಂಘಪರಿವಾರ ಆತನನ್ನು ಓರ್ವ ಮಹಾನ್ ಹಿಂದೂ ದಾರ್ಶನಿಕನೆಂದು ಪರಿಗಣಿಸುವ ವಿಷಯ ನಮಗೆಲ್ಲರಿಗೂ ತಿಳಿದಿದೆ.

ಇದೇ ಸ್ವಾಮೀಜಿ ಫೆಬ್ರವರಿ 2, 1900ರಂದು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಪಾಸಡೇನ ನಗರದಲ್ಲಿನ ಶೇಕ್ಸ್ ಪಿಯರ್ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಸಭೆಯೊಂದರಲ್ಲಿ ‘ಬೌದ್ಧಮತೀಯ ಭಾರತ’ ಎಂಬ ವಿಷಯದ ಮೇಲೆ ಮಾತನಾಡುತ್ತಾ ‘ಪ್ರಾಚೀನ ಹಿಂದೂ ಶಿಷ್ಟಾಚಾರಗಳನುಸಾರ ಬೀಫ್ ಸೇವಿಸದಿರುವವನು ಒಳ್ಳೆಯ ಹಿಂದೂ ಅಲ್ಲವೆಂದು ನಾನು ಹೇಳಿದರೆ ನಿಮಗೆ ಭಾರೀ ಆಶ್ಚರ್ಯವಾಗಲಿದೆ. ಆತ ಕೆಲವು ವಿಶೇಷ ಸಂದರ್ಭಗಳಲ್ಲಿ ಗೂಳಿಯೊಂದನ್ನು ಬಲಿಯಾಗಿ ಅರ್ಪಿಸಿದ ನಂತರ ಅದನ್ನು ತಿನ್ನಬೇಕು’ ಎಂದು ಹೇಳಿದ್ದರು (The Complete Works of Swami Vivekananda, ಸಂಪುಟ-3).

ವಿವೇಕಾನಂದರಿಂದ ಸ್ಥಾಪಿಸಲ್ಪಟ್ಟ ರಾಮಕೃಷ್ಣ ಮಿಷನ್‌ನ ಪ್ರಾಯೋಜಕತ್ವದಲ್ಲಿ ರಚಿಸಲ್ಪಟ್ಟಿರುವ ಇತರ ಸಂಶೋಧನಾ ಕೃತಿಗಳು ಈ ಸತ್ಯಾಂಶವನ್ನು ಪುಷ್ಟೀಕರಿಸಿವೆ. ವೇದಕಾಲೀನ ಇತಿಹಾಸ ಮತ್ತು ಸಂಸ್ಕೃತಿ ವಿಷಯದಲ್ಲಿ ಓರ್ವ ಖ್ಯಾತಿವೆತ್ತ ತಜ್ಞರಾದ ಸಿ. ಕುನ್ಹನ್ ರಾಜಾ ತನ್ನ  “Vedic Culture” ಎಂಬ ಲೇಖನದಲ್ಲಿ ‘ಬ್ರಾಹ್ಮಣರೂ ಸೇರಿ ಂತೆ ವೈದಿಕ ಆರ್ಯರು ಮೀನು, ಮಾಂಸ ಮತ್ತು ಗೋಮಾಂಸ ಕೂಡ ಸೇವಿಸುತ್ತಿದ್ದರು. ವಿಶೇಷ ಅತಿಥಿಯ ಗೌರವಾರ್ಥವಾಗಿ ಭೋಜನ ಕಾಲದಲ್ಲಿ ಗೋಮಾಂಸ ಬಡಿಸಲಾಗುತ್ತಿತ್ತು. ವೈದಿಕ ಆರ್ಯರು ಗೋಮಾಂಸ ಸೇವಿಸುತ್ತಿದ್ದರಾದರೂ ಕರಾವಿನ ಹಸುಗಳನ್ನು ಕೊಲ್ಲುತ್ತಿರಲಿಲ್ಲ. ಗೋವಿಗೆ ಇರುವ ಹಲವು ಪರ್ಯಾಯ ಶಬ್ದಗಳ ಪೈಕಿ ಅಘ್ನವೂ ಒಂದು. ಅಘ್ನ ಅಂದರೆ ಕೊಲ್ಲಬಾರದ್ದು ಎಂದರ್ಥ. ಆದರೆ ಅತಿಥಿಯು ಗೋಘ್ನ -ಅಂದರೆ ಯಾರಿಗಾಗಿ ಗೋವನ್ನು ಕೊಲ್ಲಲಾಗುತ್ತದೋ ಅವನು. ಕೇವಲ ಹೋರಿಗಳನ್ನು, ಬಂಜೆ ದನಗಳನ್ನು ಮತ್ತು ಕರುಗಳನ್ನು ಮಾತ್ರ ಕೊಲ್ಲಲಾಗುತ್ತಿತ್ತು’ ಎಂದು ಬರೆದಿದ್ದಾರೆ. (ಸುನೀತಿ ಕುಮಾರ್ ಮತ್ತು ಇತರರು ಸಂಪಾದಿಸಿರುವ The Cultural Heritage of India, ಸಂಪುಟ 1)

ಅನೇಕ ವೈದಿಕ ಹಾಗೂ ಹಿಂದೂ ಧರ್ಮಗ್ರಂಥಗಳನ್ನು ಅಭ್ಯಸಿಸಿದ ಡಾ.ಬಿ.ಆರ್. ಅಂಬೇಡ್ಕರರು ಹೇಳುವಂತೆ, ‘ಹಿಂದೂಗಳು ಗೋಮಾಂಸವನ್ನೆಂದೂ ಭಕ್ಷಿಸಿರಲಿಲ್ಲ ಮಾತ್ರವಲ್ಲ ಹಸುವನ್ನು ಸದಾಕಾಲವೂ ಪೂಜ್ಯ ಪ್ರಾಣಿಯೆಂದು ಕಾಣುತ್ತಾ ಗೋಹತ್ಯೆಯನ್ನು ವಿರೋಧಿಸುತ್ತಿದ್ದರು ಎಂದು ವಾದಿಸುವ ಬ್ರಾಹ್ಮಣ ವಿದ್ವಾಂಸರ ನಿಲುವನ್ನು ಒಪ್ಪಲು ಸಾಧ್ಯವೇ ಇಲ್ಲ.......... ಈ ಪುರಾವೆಗಳಿರುವಾಗ ಹಿಂದೂಗಳು - ಬ್ರಾಹ್ಮಣರು ಹಾಗೂ ಬ್ರಾಹ್ಮಣೇತರರು - ಕೇವಲ ಮಾಂಸವನ್ನಷ್ಟೇ ಅಲ್ಲ, ಗೋಮಾಂಸವನ್ನೂ ಭಕ್ಷಿಸುತ್ತಿದ್ದ ಕಾಲವೊಂದಿತ್ತು ಎಂಬುದನ್ನು ನಂಬದಿರಲು ಯಾರಿಂದಲೂ ಸಾಧ್ಯವಿಲ್ಲ’. (Dr. Babasaheb Ambedkar Writings and Speeches, ಸಂಪುಟ-7)

ಇನ್ನು ಹಿಂದುತ್ವವಾದಿಗಳ ಮತ್ತೊಬ್ಬ ಹೀರೊ ಸಾವರ್ಕರ್ ವಾಸ್ತವದಲ್ಲಿ ನಾಸ್ತಿಕವಾದಿಯಾಗಿದ್ದರು. ಗೋಭಕ್ತಿಯನ್ನು ಮೂರ್ಖತನವೆಂದು ಕರೆದಿದ್ದ ಆತ ‘ನಮ್ಮ ಕೃಷಿ ಪ್ರಧಾನ ದೇಶಕ್ಕೆ ಉಪಯುಕ್ತ ಪ್ರಾಣಿಗಳಾದ ಆಕಳುಗಳನ್ನು ಎಷ್ಟು ಬೇಕೊ ಅಷ್ಟು ಬಳಸಬೇಕು. ಗೋವು ದೇವತೆ; ಪುರಾಣಗಳಲ್ಲಿ ಗೋಪೂಜೆ ಧರ್ಮವೆಂದು ಹೇಳಲಾಗಿದೆ ಎನ್ನುವುದು ಬರೀ ಬೊಗಳೆ. ಏಕೆಂದರೆ ಅದೇ ಪುರಾಣ ದೇವರು ವರಾಹಾವತಾರ ತಾಳಿದ್ದ ಎನ್ನುತ್ತದೆ. ಆದುದರಿಂದ ಹಂದಿರಕ್ಷಣೆಯನ್ನೂ ಏಕೆ ಮಾಡಬಾರದು ಎಂದು ಕೇಳಬೇಕಾಗುತ್ತದೆ....... ಗೋಪೂಜೆ ಧರ್ಮ ಎಂದು ಬೊಗಳೆ ಬಿಟ್ಟರೆ ದೇಶದ ಸರ್ವನಾಶ ಖಂಡಿತ. ಗೋಹತ್ಯೆ ನಡೆದರೂ ಅಡ್ಡಿಯಿಲ್ಲ, ದೇಶದ ಬುದ್ಧಿಹತ್ಯೆ ಮಾತ್ರ ಆಗಬಾರದು’ (ಸಾವರ್ಕರ್: ಒಂದು ಅಭಿನವ ದರ್ಶನ, ಅನು: ಚಂದ್ರಕಾಂತ ಪೋಕಳೆ) ಎಂದು ಹೇಳಿದ್ದ ಸಂಗತಿ ಬಹುಶಃ ಸಂಘ ಪರಿವಾರದ ಬಹುತೇಕರಿಗೆ ತಿಳಿದಿರುವಂತಿಲ್ಲ. ಕೊನೆಯದಾಗಿ ಇನ್ನೊಂದು ಬಹುಮುಖ್ಯ ವಿಚಾರವೆಂದರೆ ಆಹಾರದ ಪ್ರಧಾನ ಅಂಶವೇ ಗೋಮಾಂಸವಾಗಿರುವ ಬಿಜೆಪಿ ಆಡಳಿತದ ಗೋವಾ, ಮಿರೊರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರಗಳಲ್ಲಿ ಗೋವಧೆ ಕಾನೂನುಸಮ್ಮತವಾಗಿದೆ! ಆದರೆ ಇದ್ಯಾವುದನ್ನೂ ಅರಿಯದ ದೇಶಾದ್ಯಂತದ ಅಮಾಯಕ ಜನಸಾಮಾನ್ಯರು ಸಂಘಪರಿವಾರದ ಈ ಗೋ ರಾಜಕೀಯದ ಬಲಿಪಶುಗಳಾಗುತ್ತಿರುವುದು ಇಂದಿನ ದುರಂತ.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News