ಫಲಿಮಾರು ಅಣೆಕಟ್ಟು: ನೀರಿನ ಪ್ರಮಾಣ ಹೆಚ್ಚಾಗಿ ಕೃಷಿ ಭೂಮಿ ಜಲಾವೃತ

Update: 2020-12-13 13:09 GMT

ಪಡುಬಿದ್ರಿ: ಪಲಿಮಾರಿನಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ ಉಪ್ಪು ನೀರು ತಡೆ ಅಣೆಕಟ್ಟೆಯಲ್ಲಿ ಅಣೆಕಟ್ಟೆಯಿಂದ ನೀರು ಹೊರಹರಿವಿಗೆ ಸಂಪರ್ಕಿಸುವ ತೋಡುಗಳು ಹೂಳು ತುಂಬಿದ ಪರಿಣಾಮ ಕೃಷಿ ಭೂಮಿಗಳು ಜಲಾವೃತಗೊಂಡಿದೆ. 

25 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ನಿರ್ಮಿಸಿದ್ದ ಅಣೆಕಟ್ಟೆ ಕಾಮಗಾರಿ ದೋಷ ಕಂಡುಬಂದಿತ್ತು. ಈ ಬಗ್ಗೆ ಗ್ರಾಮಸ್ಥರಿಂದ ಸದಾ ದೂರುಗಳು ಬರುತ್ತಿದ್ದ ಹಿನ್ನಲೆಯಲ್ಲಿ ಹಳೆಯ ಅಣೆಕಟ್ಟೆ ಬಳಿಯಲ್ಲಿಯೇ 7.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ನೂತನ ಅಣೆಕಟ್ಟು ನಿರ್ಮಿಸಲಾಗಿತ್ತು. 

ಕಳೆದ ಹದಿನೈದು ದಿನಗಳ ಹಿಂದೆ ಅಣೆಕಟ್ಟೆಗೆ ಹಲಗೆ ಅಳವಡಿಸುವ ಕಾರ್ಯಪೂರ್ಣಗೊಳಿಸಲಾಗಿತ್ತು. ಆದರೆ ಸಂಪರ್ಕಿಸುವ ತೋಡುಗಳು ಹೂಳು ತುಂಬಿದ ಪರಿಣಾಮ ಕೃಷಿ ಭೂಮಿಗಳು ಜಲಾವೃತಗೊಂಡಿದೆ. ಪರಿಣಾಮ ಜಿಲ್ಲೆಯ ಪಲಿಮಾರು, ಇನ್ನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಳ್ಕುಂಜೆ ಗ್ರಾಮಗಳ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದ್ದು, ಬೆಳೆದ ತರಕಾರಿ ಗಿಡಗಳು ಕೊಳೆತು ಹೋಗಿವೆ. 

ಮಳೆಗಾಲದಲ್ಲಿ ನೆರೆಯಿಂದ ಭತ್ತದ ಕೃಷಿ ಮಾಡಲಾಗದೆ, ಸುಗ್ಗಿ ಬೆಳೆಗೆ ಮುಂದಾದರೂ ಅದು ಬೆಳೆಯಲಾಗದೆ ಈ ಭಾಗದ ಕೃಷಿಕರು ಅತಂತ್ರರಾಗಿದ್ದಾರೆ. ಜಾನುವಾರುಗಳಿಗೆ ಮೇವಿಗೂ ತತ್ವಾರ ಉಂಟಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮೇಲ್ಮಟ್ಟದಲ್ಲಿ ನೀರಿಲ್ಲದಿದ್ದರೂ, ಭೂಮಿಗಳಲ್ಲಿ ಒರೆತ ಹೆಚ್ಚಾಗಿ ಹಿಂಗಾರು ಕೃಷಿ ಮಾಡುವುದು ಕಷ್ಟವಾಗುತ್ತದೆ ಎಂದು ಕೃಷಿಕ ರಿಚರ್ಡ್ ಡಿಸೊಜ ಉಳೆಪಾಡಿ ಹೇಳುತ್ತಾರೆ. 

ಹೊಸದಾಗಿ ನಿರ್ಮಾಣಗೊಂಡ ಅಣೆಕಟ್ಟನ್ನು ಹಿಂದಿನ ಅಣೆಕಟ್ಟೆಯಷ್ಟೇ ಅಂದರೆ 7.5 ಮೀಟರ್ ವರೆಗೆ ಎತ್ತರಿಸಿ ಅಣೆಕಟ್ಟೆಯ ನಾಲ್ಕು ಕಡೆ 4x100 ಮೀಟರ್ ವ್ಯಾಪ್ತಿಯಲ್ಲಿ ನದಿಗೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಬಳ್ಕುಂಜೆ ಗ್ರಾಮಕ್ಕೆ ನೀರು ಪೂರೈಸಲು ಕಿರು ಕಾಲುವೆಯೊಂದನ್ನು ನಿರ್ಮಿಸಲಾಗಿತ್ತು. ಯೋಜನೆ ಪೂರ್ಣಗೊಂಡ ಕೆಲವೇ ತಿಂಗಳಿನಲ್ಲಿ ಅ ಕಾಲುವೆ ಸ್ಲಾಬ್ ಕುಸಿದು ಹಾನಿಯಾಗಿರುವುದು ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸುವಂತಿದೆ. ಅಣೆಕಟ್ಟೆ ನಿರ್ಮಾಣ ಸಂದರ್ಭದಲ್ಲಿಯೇ ಕೃಷಿ ಪ್ರದೇಶಗಳಿಂದ ನೀರು ಸರಾಗವಾಗಿ ಹರಿಯುವಂತೆ ಇರುವ ತೋಡುಗಳ ಹೂಳೆತ್ತಲು ಅಧಿಕಾರಿಗಳ ಗಮನ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News