ಗ್ರಾಪಂ ಚುನಾವಣೆ: ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆಗಳು ಮಾತ್ರ ಹಂಚಿಕೆ

Update: 2020-12-13 15:00 GMT

ಉಡುಪಿ, ಡಿ.13: ಈ ತಿಂಗಳ 22 ಮತ್ತು 27ರಂದು ನಡೆಯುವ ಗ್ರಾಪಂ ಚುನಾವಣೆಗಳು ಪಕ್ಷರಹಿತವಾಗಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 7(2)ರಂತೆ ಗ್ರಾಪಂ ಚುನಾವಣೆಯನ್ನು ಪಕ್ಷ ಆಧಾರ ರಹಿತವಾಗಿ ನಡೆಸುವುದರಿಂದ ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟನೆಯಲ್ಲಿ ತಿಳಿಸಿದೆ.

ಆದುದರಿಂದ ರಾಜಕೀಯ ಪಕ್ಷಗಳು ಈ ಚುನಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವಂತಿಲ್ಲ. ಸಭೆ, ಸಮಾರಂಭಗಳನ್ನು ನಡೆಸುವ, ರಾಜಕೀಯ ಮುಖಂಡರುಗಳ ಭಾವಚಿತ್ರವನ್ನು ಕರಪತ್ರಗಳಲ್ಲಿ ಮುದ್ರಿಸಿ ಪಕ್ಷದ ಬಾವುಟ ಮತ್ತು ಚಿಹ್ನೆಯನ್ನು ಬಳಸಿಕೊಂಡು ಪ್ರಚಾರ ಮಾಡುವುದು ಹಂಚುವಂತಿಲ್ಲ.
ವೇದಿಕೆಯ ಮೇಲೆ ಪಕ್ಷದ ಬಾವುಟ, ಬ್ಯಾನರ್‌ಗಳನ್ನು ಬಳಸುವಂತಿಲ್ಲ. ಸ್ಪರ್ಧಿಸುವ ಅಭ್ಯರ್ಥಿಗಳನ್ನು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿ ಎಂದು ಪರಿಚಯಿಸುವುದು ಹಾಗೂ ಅಪರ ಪರವಾಗಿ ಮತ ನೀಡಲು ವುತದಾರರನ್ನು ಕೋರುವಂತಿಲ್ಲ.

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮಾಧ್ಯಮಗಳ ಮೂಲಕ ರಾಜಕೀಯ ಮುಖಂಡರ ಭಾವಚಿತ್ರ ಹಾಗೂ ಪಕ್ಷಗಳ ಚಿಹ್ನೆಗಳನ್ನು ಬಳಸಿ ಜಾಹಿರಾತು ನೀಡುವಂತಿಲ್ಲ. ಮೇಲಿನ ಎಲ್ಲಾ ನಿಬಂಧನೆಗಳು ಗ್ರಾಪಂ ಚುನಾವಣೆ ಸಂದರ್ಭದಲ್ಲಿ ಉಲ್ಲಂಘನೆಯಾಗಿರುವುದು ಕಂಡುಬಂದಲ್ಲಿ ಅಂತಹ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News