ಉಡುಪಿ ಜಿಲ್ಲಾ ಶ್ರೀವಿಶ್ವಕರ್ಮ ಕಾರ್ಮಿಕ ಸಂಘಟನೆ ಉದ್ಘಾಟನೆ

Update: 2020-12-13 15:07 GMT

ಉಡುಪಿ, ಡಿ.13: ಉಡುಪಿ ಜಿಲ್ಲಾ ಶ್ರೀವಿಶ್ವಕರ್ಮ ಕಾರ್ಮಿಕ ಸಂಘಟನೆ ಇದರ ಉದ್ಘಾಟನಾ ಸಮಾರಂಭವು ರವಿವಾರ ಕುಂಜಿಬೆಟ್ಟುವಿನ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಜರಗಿತು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಆನೆಗುಂದಿ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ವಿಶ್ವಕರ್ಮರು ಪರಿಶ್ರಮ ಜೀವಿಗಳು. ಪ್ರಾಮಾಣಿಕವಾಗಿ ದುಡಿಯುವ ಈ ಸಮುದಾಯವು ಸಮಾಜದ ಒಳಿತಿಗೂ ಕೊಡುಗೆ ಸಲ್ಲಿಸುತ್ತಿದೆ. ಆದರೆ ಕಾರ್ಮಿಕರಿಗೆ ಸಿಗಬೇಕಾದ ನ್ಯಾಯೋಚಿತ ಸೌಲಭ್ಯ ಸಿಗುತ್ತಿಲ್ಲ ಎಂದು ಹೇಳಿದರು.

ಸಂಘಟನೆಯನ್ನು ಉದ್ಘಾಟಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ವಿಶ್ವಕರ್ಮ ಸಮುದಾಯ ಪ್ರಾಚೀನ ಸಮುದಾಯವಾಗಿದೆ. ಇವರು ಅತ್ಯಂತ ಬುದ್ಧಿವಂತರು. ಈ ಸಮುದಾಯ ಒಂದು ಮರದ ತುಂಡಿಗೂ ರೂಪ ನೀಡುವ ಪ್ರತಿಭೆ ಹೊಂದಿದೆ. ಕಾರ್ಮಿಕರ ಇಲಾಖೆಯಲ್ಲಿ 14,000 ಕೋಟಿ ರೂ. ಸಂಗ್ರಹವಾಗಿದೆ. ಕಟ್ಟಡ ನಿರ್ಮಾಣದ ಶೇ.1ರಷ್ಟು ಹಣವನ್ನು ಕಾರ್ಮಿಕರಿಗಾಗಿ ಮೀಸಲಿಡಲಾಗುತ್ತದೆ. ಆದರೆ ಅದನ್ನು ಕಾರ್ಮಿಕ ರಿಗೆ ತಲುಪಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ದೂರಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಯಿತು. ಅಧ್ಯಕ್ಷತೆಯನ್ನು ಜಿಲ್ಲಾ ಶ್ರೀವಿಶ್ವಕರ್ಮ ಕಾರ್ಮಿಕರ ಸಂಘಟನೆ ಗೌರವಾಧ್ಯಕ್ಷ ಸುಧಾಕರ್ ಆಚಾರ್ಯ ತ್ರಾಸಿ ವಹಿಸಿದರು.

ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ, ನಗರ ಸಭೆ ಸದಸ್ಯ ಬಾಲಕೃಷ್ಣ ಶೆಟ್ಟಿ, ದ.ಕ. ಮತ್ತು ಉಡುಪಿ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಸಂಘಟನೆ ಅಧ್ಯಕ್ಷ ಶ್ರೀಧರ್ ಆಚಾರ್ಯ ಕರಂಬಳ್ಳಿ, ಕೋಶಾಧಿಕಾರಿ ರಾಮು ಆಚಾರ್ಯ ಮನ್ನೋಳಿಗುಜ್ಜಿ, ಉಪಾಧ್ಯಕ್ಷ ಶ್ರೀಧರ್ ಆಚಾರ್ಯ ಕೊಳಲಗಿರಿ, ಉಪಾಧ್ಯಕ್ಷ ವೈ.ಬಿ.ರಾಘವೇಂದ್ರ ಆಚಾರ್ಯ ಸಾಲಿಗ್ರಾಮ, ಕಾನೂನು ಸಲಹೆಗಾರ ಸಂತೋಷ್ ಕುಮಾರ್ ಮೂಡುಬೆಳ್ಳೆ, ಗೌರವ ಸಲಹೆಗಾರ ವಾದಿರಾಜ್ ಆಚಾರ್ಯ ಉಪಸ್ಥಿತರಿದ್ದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ಇನ್ನಾ ಸ್ವಾಗತಿಸಿದರು. ಗೀತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News