ಕೊಲೆಯತ್ನ ಪ್ರಕರಣದ ಆರೋಪಿಗಾಗಿ ಶೋಧ: ಆಸ್ಪತ್ರೆಗೆ ಬಿಜೆಪಿ ಮುಖಂಡರ ಭೇಟಿ

Update: 2020-12-13 18:13 GMT

ಕೊಣಾಜೆ, ಡಿ.13: ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ಮದ್ರಸ ಧಾರ್ಮಿಕ ಗುರು, ಅಸೈಗೋಳಿ ನಿವಾಸಿ ಹನೀಫ್ ನಿಝಾಮಿ(40) ಅವರಿಗೆ ಗಂಭೀರ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿ ಪರಾರಿಯಾಗಿರುವ ಆರೋಪಿ ಅಬ್ದುಲ್ ಕರೀಂ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.

ರಾಜಕೀಯ ವೈಷಮ್ಯ ವಿಷಯಕ್ಕೆ ಸಂಬಂಧಿಸಿದಂತೆ ಹನೀಫ್ ಅವರಿಗೆ ಶನಿವಾರ ರಾತ್ರಿ ಆರೋಪಿ ಸುತ್ತಿಗೆಯಲ್ಲಿ ತಲೆಗೆ ಬಡಿದು ಕೊಲೆಗೆ ಯತ್ನಿಸಿ ಬಳಿಕ ಪರಾರಿಯಾಗಿದ್ದನು. ಗಂಭೀರ ಗಾಯಗೊಂಡ ಹನೀಫಿ ನಿಝಾಮಿಯವರನ್ನು ಬಳಿಕ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಿಜೆಪಿ ಮುಖಂಡರ ಭೇಟಿ: ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹನೀಫ್ ನಿಝಾಮಿ ಅವರನ್ನು ಬಿಜೆಪಿ ಮುಖಂಡರು ಭೇಟಿ ಮಾಡಿ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಂಇಐ ಸಂಸ್ಥೆಯ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಬೋಳಿಯಾರ್, ಯಾವುದೇ ಜಾತಿ ಭೇದವಿಲ್ಲದೆ ಜನರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಹನೀಫ್ ನಿಝಾಮಿ ಅವರ ಮೇಲೆ ನಡೆದಿರುವ ದಾಳಿಯನ್ನು ಬಿಜೆಪಿ ಖಂಡಿಸಿದ್ದು, ಆರೋಪಿಯನ್ನು ಶೀಘ್ರವಾಗಿ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚಂದ್ರಹಾಸ ಪಂಡಿತ್ ಹೌಸ್, ಸತೀಶ್ ಕುಂಪಲ, ಯಶವಂತ ಅಮೀನ್, ಅಲ್ಪಸಂಖ್ಯಾತ ನಿಗಮದ ನಿರ್ದೇಶಕ ಸಿರಾಜುದ್ದೀನ್, ನವೀನ್ ಪಾದಲ್ಪಾಡಿ, ಜೀವನ್ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News