ಯುನಿವೆಫ್ ನಿಂದ ಬೋಳಾರದಲ್ಲಿ ಸೀರತ್ ಸಮಾವೇಶ

Update: 2020-12-14 04:32 GMT

ಮಂಗಳೂರು, ಡಿ.14: ಯುನಿವೆಫ್ ಕರ್ನಾಟಕವು ನವೆಂಬರ್ 27ರಿಂದ  2021ರ ಜನವರಿ 29ರವರೆಗೆ 'ಸಾಮಾಜಿಕ ತಾರತಮ್ಯ ಮತ್ತು ಪ್ರವಾದಿ ಮುಹಮ್ಮದ್ (ಸ.)' ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಅಂಗವಾಗಿ  ಮಂಗಳೂರು ಶಾಖೆಯ ವತಿಯಿಂದ ಶುಕ್ರವಾರ ಬೋಳಾರದ ಶಾದಿ ಮಹಲ್ ನಲ್ಲಿ ಸೀರತ್ ಸಮಾವೇಶ ನಡೆಯಿತು.

'ಭಾರತದ ನಾಗರಿಕತೆಗೆ ಪ್ರವಾದಿ(ಸ)ರ ಕೊಡುಗೆ' ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತನಾಡಿ, "ಇಸ್ಲಾಮಿನ ವೈಭವೋಪೇತ ಇತಿಹಾಸವನ್ನು ಪ್ರತಿಯೊಬ್ಬ ಮುಸ್ಲಿಮನೂ ಅಧ್ಯಯನ ಮಾಡಬೇಕು. ಭಾರತದ ಭಾಷೆ, ಉಡುಗೆ ತೊಡುಗೆ, ಸಂಸ್ಕೃತಿ, ರಾಜಕೀಯ ವ್ಯವಸ್ಥೆ ಮತ್ತು ಸಾಮಾಜಿಕ ವ್ಯವಸ್ಥೆ ಇವುಗಳಿಗೆ ಇಸ್ಲಾಮ್ ನೀಡಿದ ಕೊಡುಗೆ ಅಸಾಮಾನ್ಯ. ಸ್ವಾಮಿ ವಿವೇಕಾನಂದರು ಹೇಳುವಂತೆ ಭಾರತಕ್ಕೆ ಇಸ್ಲಾಮ್ ನಿಮ್ನ ಜಾತಿಯವರಿಗೆ ಅನುಗ್ರಹವಾಗಿ ಬಂತು. ಇಸ್ಲಾಮಿನ ಸರಳತೆ, ಸಮಾನತೆಗೆ ಆಕರ್ಷಿತರಾಗಿ ಜನರು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು. ಭಾರತದ ವಾಸ್ತುಶಿಲ್ಪಕ್ಕೂ ಇಸ್ಲಾಮಿನ ಕೊಡುಗೆ ಅನನ್ಯ. ಇಂತಹ ಒಂದು ಶ್ರೀಮಂತ ಸಂಸ್ಕೃತಿಯುಳ್ಳ ಸಮುದಾಯ ಇಂದು ಯಾವುದೇ ಸಾಮಾಜಿಕ ಸ್ಥಾನಮಾನಗಳಿಲ್ಲದೆ ಹೀನಾಯ ಸ್ಥಿತಿಗೆ ತಲುಪಿರುವುದು ಶೋಚನೀಯ. ಪ್ರವಾದಿಯವರ ಸಂದೇಶಗಳ ಅನುಷ್ಠಾನದಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆ ಸಾಧ್ಯ. ಈ ಮಾನವೀಯ ಸಂದೇಶಗಳ ಪ್ರಚಾರದಿಂದ ಅಪಕಲ್ಪನೆಗಳು ನೀಗಿ ಸೌಹಾರ್ದಯುತ ಸಮಾಜ ನಿರ್ಮಾಣವಾಗುತ್ತದೆ" ಎಂದರು.
ಬೋಳಾರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹುಸೈನ್ ಬೋಳಾರ್ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಯುನಿವೆಫ್ ಕಾರ್ಯದರ್ಶಿ್ ಯು.ಕೆ.ಖಾಲಿದ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಅಭಿಯಾನ ಸಂಚಾಲಕ ವಕಾಝ್ ಅರ್ಶಲನ್ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ರಾಹಿಲ್ ರಝಾಕ್ ಸಯೀದ್ ಕಿರಾಅತ್ ಪಠಿಸಿದರು. ಜಿಲ್ಲಾಧ್ಯಕ್ಷ ನೌಫಲ್ ಹಸನ್ ಕಾರ್ಯಕ್ರಮ ನಿರೂಪಿಸಿದರು. ಅರೀಝ್ ವಂದಿಸಿದರು. ಸಹ ಸಂಚಾಲಕ ಅತೀಖುರ್ರಹ್ಮಾನ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News