ದನಗಳ್ಳತನ ಪ್ರಕರಣ: ಕಾರ್ಕಳದಲ್ಲಿ ಬಜರಂಗ ದಳದ ಮಾಜಿ ಮುಖಂಡನ ಬಂಧನ

Update: 2020-12-14 05:08 GMT

ಕಾರ್ಕಳ:, ಡಿ.14 ದನಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಬಜರಂಗ ದಳದ ಮಾಜಿ ಮುಖಂಡನೊಬ್ಬನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

 ತೆಳ್ಳಾರು ನಿವಾಸಿ ಅನಿಲ್ ಪ್ರಭು(45) ಬಂಧಿತ ಆರೋಪಿ. ಈತ ಬಜರಂಗ ದಳ ಕಾರ್ಕಳ ನಗರ ಘಟಕದ ಮಾಜಿ ಸಂಚಾಲಕ ಆಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ದನಗಳನ್ನು ಕಳ್ಳತನ ಮಾಡುವರಿಗೆ ಅಭಯ ನೀಡುತ್ತಿದ್ದ ಎಂಬ ಆರೋಪದಲ್ಲಿ ಈತನನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ವಿವರ: ಕಾರ್ಕಳ ನಗರದ ಬಂಗ್ಲೆಗುಡ್ಡೆ ಜಂಕ್ಷನ್ ಬಳಿಯಲ್ಲಿ ಕೆಲ ದಿನಗಳ ಹಿಂದೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯೋರ್ವನಿಗೆ ವಾಹನ ನಿಲ್ಲಿಸುವಂತೆ ಸೂಚಿಸಿದ್ದರು. ಈ ವೇಳೆ ವಾಹನ ಸವಾರ ವಾಹನವನ್ನು ತೊರೆದು ಪರಾರಿಯಾಗಿದ್ದಾನೆ. ಪೊಲೀಸರು ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ದನದ ಮಾಂಸ ಪತ್ತೆಯಾಗಿತ್ತೆನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಇಲ್ಲಿನ ಹುಡ್ಕೋ ಕಾಲನಿ ನಿವಾಸಿ ಮುಹಮ್ಮದ್ ಯಾಸೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಪೊಲೀಸ್ ವಿಚಾರಣೆಯ ವೇಳೆ ಯಾಸೀನ್,  ದನಗಳನ್ನು ಕಳವುಗೈದು ಮಾಂಸ ಮಾಡಿ ಮಾರಾಟ ಮಾಡಲು ಪೊಲೀಸರಿಂದ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಅನಿಲ್ ಪ್ರಭು ಆಶ್ವಾಸನೆ ನೀಡುತ್ತಿದ್ದ. ಅದಕ್ಕಾಗಿ ಹಣ ಪಡೆಯುತ್ತಿದ್ದ ಎಂದು ಬಾಯಿಬಿಟ್ಟಿದ್ದನೆನ್ನಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಅನಿಲ್ ಪ್ರಭುನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News